ಸರ್ಕಾರದಿಂದ ಹಾಸನ ನಿರ್ಲಕ್ಷ್ಯ: ಶಾಸಕ ಕುಮಾರಸ್ವಾಮಿ
ಕ.ಪ್ರ.ವಾರ್ತೆ ಸಕಲೇಶಪುರ ಆ. 7
ರಾಜ್ಯ ಸರ್ಕಾರ ಹಾಸನ ಜಿಲ್ಲೆಯನ್ನು ಎಲ್ಲ ರೀತಿಯಿಂದಲೂ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಆರೋಪಿಸಿದರು.
ಮಂಗಳವಾರ ತಾಲೂಕಿನ ಯಸಳೂರು ಹೋಬಳಿಯಾದ್ಯಂತ ಉಂಟಾಗಿರುವ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ ವಾರದ ಸುರಿದ ಮೇಘ ಸ್ಫೋಟದಿಂದಾಗಿ ಸರ್ಕಾರಿ ಆಸ್ತಿ-ಪಾಸ್ತಿ ಹಾಗೂ ಖಾಸಗಿ ಆಸ್ತಿಗಳು ಭಾರಿ ಪ್ರಮಾಣದಲ್ಲಿ ನಷ್ಟಕ್ಕೀಡಾಗಿದೆ. ಯಸಳೂರು ಹೋಬಳಿಯೊಂದರಲ್ಲೆ ಸುಮಾರು 30 ಕೋಟಿಗೂ ಹೆಚ್ಚಿನ ನಷ್ಟ ಉಂಟಾಗಿದೆ ಎಂದು ಹೇಳಿದರು.
ಯಸಳೂರು ಹೋಬಳಿಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು ಸುಮಾರು 20 ಎಕರೆ ಕಾಫಿ ತೋಟ ಹಾಗೂ 2000 ಸಾವಿರ ಎಕರೆ ಬತ್ತ ನಾಟಿ ಮಾಡಿದ ಗದ್ದೆಗಳು ಅತಿವೃಷ್ಟಿಯಿಂದ ಹಾನಿಗೀಡಾಗಿವೆ. ಈ ಬಗ್ಗೆ ಅರಿವಿರುವ ಜಿಲ್ಲಾ ಉಸ್ತುವರಿ ಸಚಿವರು ಒಮ್ಮೆಯು ತಿರುಗಿ ನೊಡದಿರುವುದು ಬೇಸರ ತರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವೃಷ್ಟಿಗೆ ಒಳಗಾಗಿರುವ ತಾಲೂಕುಗಳಿಗೆ ತೋರುತ್ತಿರುವ ಆಸಕ್ತಿಯನ್ನು ಅತಿವೃಷ್ಟಿಗೆ ಒಳಗಾಗಿರುವ ತಾಲೂಕುಗಳಿಗೆ ತೋರದಿರುವುದು ಒಳ್ಳೆಯ ಲಕ್ಷಣವಲ್ಲ. ನೆರೆಯ ಕೊಡಗು ಜಿಲ್ಲೆಗೆ 50 ಕೋಟಿ ವಿಶೇಷ ಅನುದಾನ ನೀಡಿರುವ ಮುಖ್ಯಮಂತ್ರಿಗಳಿಗೆ ತಾಲೂಕಿನಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಅರಿವಿಲ್ಲದಿರುವುದು ಹಾಗೂ ಈ ಬಗ್ಗೆ ಇದುವರೆಗೆ ಯಾವುದೆ ಪ್ರತಿಕ್ರಿಯೆ ನೀಡದಿರುವುದು ಹಾಸನ ಜಿಲ್ಲೆಯನ್ನು ನಿರ್ಲಕ್ಷಿಸಿರುವ ಸಂಕೇತವಾಗಿದೆ ಎಂದರು.
ಜೆಡಿಎಸ್ ಮುಖಂಡರಾದ ದಿವಾಕರ್, ನಾಗರಾಜ್ ಮುಂತಾದವರಿದ್ದರು.