ಸರ್ದಾರ್ ಪಟೇಲ್ ಪ್ರಶಸ್ತಿ; ಕೃಷಿ ವಿವಿಯಲ್ಲಿ ಸಂಭ್ರಮ
ಕ.ಪ್ರ.ವಾರ್ತೆ ಹಾಸನ ಆ.7
ರಾಷ್ಟ್ರಮಟ್ಟದಲ್ಲಿ ಕೊಡಮಾಡುವ ಪ್ರತಿಷ್ಠಿತ ಸರ್ದಾರ್ ಪಟೇಲ್ ಅತ್ಯುತ್ತಮ ಸಂಸ್ಥೆ-2012 ಪ್ರಶಸ್ತಿಯು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ಬಂದಿರುವ ಪ್ರಯುಕ್ತ ಇತ್ತೀಚೆಗೆ ನಗರದ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ವಿಶ್ವವಿದ್ಯಾನಿಲಯದ ಶಿಕ್ಷಣ ನಿರ್ದೇಶಕ ಡಾ.ಡಿ.ಪಿ. ಕುಮಾರ್ ಮಾತನಾಡಿ, ಈ ಪ್ರಶಸ್ತಿಯು 2 ನೇ ಬಾರಿಗೆ ವಿಶ್ವವಿದ್ಯಾನಿಲಯಕ್ಕೆ ಬಂದಿರುವುದು ವಿಶ್ವವಿದ್ಯಾನಿಲಯದ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಪ್ರಶಸ್ತಿಯು ಲಭಿಸಲು ಶ್ರಮಿಸಿದ ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆ ವಿಭಾಗದ ಎಲ್ಲರನ್ನು ಹಾಗೂ ಪೂರಕವಾಗಿ ತಮ್ಮ ಪ್ರತಿಭೆಯ ಮೂಲಕ ಪ್ರಶಸ್ತಿ ಲಭಿಸಲು ಕಾರಣರಾದ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಸಂಶೋಧನಾ ವಿಭಾಗದಲ್ಲಿ ವಿಜ್ಞಾನಿಗಳು ಬತ್ತ, ರಾಗಿ, ತೊಗರಿ, ಮೆಣಸಿನಕಾಯಿ, ಅಲಸಂದೆ, ಹತ್ತಿ, ಇತರ ಏಕದಳ, ದ್ವಿದಳ, ಎಣ್ಣೆಕಾಳು, ವಾಣಿಜ್ಯ ಬೆಳೆಗಳಲ್ಲಿ ಅಧಿಕ ಇಳುವರಿ ಕೊಡುವ ತಳಿಗಳು ಹಾಗೂ ಹೈಬ್ರಿಡ್ಗಳನ್ನು ಅಭಿವೃದ್ಧಿ ಪಡಿಸಿ ರೈತರಿಗೆ ನೆರವಾಗಿದ್ದಾರೆ. ಜತೆಗೆ ರೈತರಿಗೆ ತಂತ್ರಜ್ಞಾನ ವರ್ಗಾವಣೆಯಲ್ಲೂ ಮುಂಚೂಣಿಯಲ್ಲಿ ಇರುವುದನ್ನು ಮನಗಂಡು ಈ ಪ್ರಶಸ್ತಿ ಕೊಡಲಾಗಿದೆ.
ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪ್ರತಿಷ್ಠಿತ ಪರೀಕ್ಷೆಗಳ ಫಲಿತಾಂಶದಲ್ಲಿ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಇತರೆ ಎಲ್ಲಾ ಚಟು ವಟಿಕೆಗಳಲ್ಲಿಯೂ ಸಹ ಮುಂಚೂಣಿ ಯಲ್ಲಿರುವುದು ವಿಶ್ವವಿದ್ಯಾನಿಲಯದ ಹೆಗ್ಗಳಿಕೆ ಎಂದರು. ಸಂಶೋಧನಾ ನಿರ್ದೇಶಕ ಡಾ.ಎಂ.ಎ.ಶಂಕರ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಸಂಶೋಧನಾ ಯೋಜನೆಗಳನ್ನು ಸಲ್ಲಿಸಲು ಶ್ರಮಿಸಬೇಕೆಂದು ಅಧ್ಯಾಪಕ ವರ್ಗಕ್ಕೆ ಪ್ರೇರೇಪಿಸಿದರು. ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಲ್.ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಧ್ಯಾಪಕ ಡಾ.ಮಹಾಬಲೇಶ್ವರ ಹೆಗಡೆ ಸ್ವಾಗತಿಸಿ, ಡಾ. ಎನ್.ಇ. ತ್ಯಾಗರಾಜ್ ವಂದಿಸಿದರು. ಸಹ ಪ್ರಾಧ್ಯಾಪಕ ಡಾ.ಎನ್. ಉಮಾ ಶಂಕರ್ ನಿರೂಪಿಸಿದರು.