ಅಕ್ರಮ ಮದ್ಯ ವಶ; ಆರೋಪಿ ಬಂಧನ
ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ಚೀಕನಹಳ್ಳಿ ಕಲ್ಲೇಶ್ವರ ಬಡಾವಣೆ ಹತ್ತಿರ ಅಕ್ರಮ ಮದ್ಯ ಮಾರಾಟ ಮಾಡಲು ತೆರಳುತ್ತಿದ್ದ ಕರಿಗೌಡ (39) ಎಂಬಾತನನ್ನು ಬುಧವಾರ ಅರೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವನ ಬಳಿಯಿದ್ದ 30 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಅರಸೀಕೆರೆ ತಾಲೂಕು ಬಾಣಾವರ ಹೋಬಳಿ, ಬೆಂಡೆಕೆರೆ ಗ್ರಾಮದ ಚಂದ್ರಮ್ಮ ಅವರು ತಮ್ಮ ಮನೆಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಚಂದ್ರಮ್ಮ ನಾಪತ್ತೆಯಾಗಿದ್ದಾರೆ. ಮದ್ಯ ಮಾರಾಟಕ್ಕಿಟ್ಟಿದ್ದ 509 ರು. ಬೆಲೆಯ 90 ಎಂಎಲ್ನ 23 ರಾಜಾ ವಿಸ್ಕಿ ಮದ್ಯದ ಸಾಚೇಟ್ಗಳನ್ನು ವಶಪಡಿಸಿಕೊಂಡಿರುವ ಬಾಣಾವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವ್ಯಕ್ತಿ ನಾಪತ್ತೆ
ಬೇಲೂರು: ತಾಲೂಕಿನ ಮಾದಿಹಳ್ಳಿ ಹೋಬಳಿ, ಬೊಮ್ಮೇನಹಳ್ಳಿ ಗ್ರಾಮದ ವೆಂಕಟೇಗೌಡ (43) ಅವರು ಚೆನ್ನೈಯಲ್ಲಿ ಬೇಕರಿ ಕೆಲಸ ಮಾಡುತ್ತಿದ್ದು ಆಗಾಗ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಆದರೆ ಫೆ.9 ರಂದು ಮಧ್ಯಾಹ್ನ 1-45 ರಲ್ಲಿ ಬೊಮ್ಮೇನಹಳ್ಳಿಯಿಂದ ಬೇಕರಿ ಕೆಲಸಕ್ಕೆ ಹೋಗುವುದಾಗಿ ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. 5.7 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ ಎಂದು ಪತ್ನಿ ಲತಾ ಹಳೇಬೀಡು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.