ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ನಗರಕ್ಕೆ ನೀಲೋತ್ತಲ್ ಬಸು

Rashmi Kasaragodu
Updated On : 9 Aug 2013, 12:21 pm

ಹಾಸನ: ಸಿಪಿಎಂ ಕೇಂದ್ರ ಸಮಿತಿ ಸದಸ್ಯರಾದ ಖ್ಯಾತ ಆರ್ಥಿಕ ತಜ್ಞ ನೀಲೋತ್ತಲ್ ಬಸು ಅವರು ನಗರಕ್ಕೆ ಆಗಸ್ಟ್ 9 ರಂದು ಆಗಮಿಸಿ, ಇಲ್ಲಿ ನಡೆಯುತ್ತಿರುವ ಸಿಪಿಎಂ ರಾಜ್ಯ ಮಟ್ಟದ ಅಧ್ಯಯನ ಶಿಬಿರದಲ್ಲಿ ಬೆಳಗ್ಗೆ ಭಾಗವಹಿಸುವರು. ಮಧ್ಯಾಹ್ನ 1 ಕ್ಕೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅಂದು ಭಾಗವಹಿಸಬೇಕಾಗಿದ್ದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅನಾರೋಗ್ಯ ನಿಮಿತ್ತ ಆಗಮಿಸುತ್ತಿಲ್ಲ. ಆಗಸ್ಟ್ 10 ರಂದು ಸಿಪಿಎಂ ಪೊಲಿಟ್ ಬ್ಯುರೋ ಸದಸ್ಯ ಕಾಂ. ಸೀತಾರಾಂ ಯಚೂರಿ ದೇಶದ ಅಭಿವೃದ್ಧಿಗಿರುವ ಪರ್ಯಾಯ ಮಾರ್ಗಗಳು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುವರು ಎಂದು ಜಿಲ್ಲಾ ಸಿಪಿಎಂ ಮುಖಂಡ ಧರ್ಮೇಶ್ ತಿಳಿಸಿದ್ದಾರೆ.
ರೈತರ ನೆರವಿಗೆ ಸರ್ಕಾರ ಸ್ಪಂದಿಸಲಿ
ಸಕಲೇಶಪುರ: ಕಾಡಾನೆ ಹಾವಳಿ ಹಾಗೂ ಅತಿವೃಷ್ಟಿ ಸಮಸ್ಯೆಯಿಂದ ಬೆಳೆ ಹಾಗೂ ಬದುಕನ್ನು ಕಳೆದುಕೊಂಡಿರುವ ಬೆಳೆಗಾರರ ನೆರವಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಹಾನುಬಾಳ್ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಭಾಸ್ಕರ್ ಒತ್ತಾಯಿಸಿದ್ದಾರೆ. ಕಳೆದ 30 ವರ್ಷದಲ್ಲೆ ಭೀಕರ ಅತಿವೃಷ್ಟಿಗೆ ತುತ್ತಾಗಿರುವ ತಾಲೂಕಿನಲ್ಲಿ ಕಾಡಾನೆ ಹಾವಳಿಯು ಹೆಚ್ಚಿರುವುದರಿಂದಾಗಿ ರೈತರು ಬೆಳೆ ಉಳಿಸಿಕೊಳ್ಳಲು ಸಂಕಷ್ಟ ಪಡುವಂತಾಗಿದೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉನ್ನತ ಮಟ್ಟದ ಅಧಿಕಾರಿಗಳ ತಂಡವನ್ನು ಕಳುಹಿಸಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು. ಆದರೆ 2006-07 ಹಾಗೂ 2008-09 ರಲ್ಲಿ ಅತಿವೃಷ್ಟಿಯಿಂದ ಕಾಫಿ ಉದ್ಯಮ ನಲುಗಿತ್ತು. ಈ ಸಂದರ್ಭದಲ್ಲಿ ಕೇಂದ್ರ ತಂಡ ಹಾಗೂ ಜಿಲ್ಲಾಧಿಕಾರಿಗಳು ಸಮೀಕ್ಷೆ ನಡೆಸಿ ಹಾನಿಯ ವರದಿ ನೀಡಿದ್ದರೂ ಯಾವುದೇ ಪರಿಹಾರ ದೊರೆತಿರಲಿಲ್ಲ. ಆದರೆ ಈ ಬಾರಿ ಸಮೀಕ್ಷೆ ನಡೆಸಿ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶಿಕ್ಷಕ್ ತರಬೇತಿ ಕೋರ್ಸ್ ಪರೀಕ್ಷೆ
ಹಾಸನ: ಪ್ರೌಢ ಶಿಕ್ಷಣ ಪರೀಕ್ಷೆ ಮಂಡಳಿ, ಬೆಂಗಳೂರು ವತಿಯಿಂದ ಮೇ 2013ರಲ್ಲಿ ನಡೆಯಬೇಕಿದ್ದ ಹಿಂದಿ ಶಿಕ್ಷಕ್ ಕೋರ್ಸ್ ಪರೀಕ್ಷೆಯು ದಿನಾಂಕ 26ನೇ ಆಗಸ್ಟ್ 2013ರಿಂದ ಪ್ರಾರಂಭವಾಗಲಿದೆ. ಕಾಲೇಜಿನ ನಾನಾ ಜಿಲ್ಲೆಯ ಪ್ರಶಿಕ್ಷಣಾರ್ಥಿಗಳು ಪ್ರವೇಶ ಪತ್ರಕ್ಕಾಗಿ ಪ್ರಾಂಶುಪಾಲರನ್ನು ಸಂಪರ್ಕಿಸಲು ಸೂಚಿಸುತ್ತಾ, 2013-14ನೇ ಸಾಲಿಗೆ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳು ಪ್ರಾಂಶುಪಾಲರು, ಹಿಂದೀ ಶಿಕ್ಷಕ್ ಟ್ರೈನಿಂಗ್ ಕಾಲೇಜ್, ಕರ್ನಾಟಕ ಹಿಂದೀ ಸಭಾ, ಹಿಂದಿ ಭವನ, ಜಿಲ್ಲಾ ಪಂಚಾಯತ್ ಕಚೇರಿ ಎದುರು, ಮಂಡ್ಯ ಇಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08232-226667  ಮತ್ತು  9448268114 ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ವ್ಯಕ್ತಿಯ ಕೊಲೆ
ಹಾಸನ: ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಮನೆ ಬಾಗಿಲಲ್ಲೇ ಬಿಸಾಡಿ ಹೋಗಿರುವ ದುರ್ಘಟನೆ ನಗರದ ಹೊರವಲಯ ಚನ್ನಪಟ್ಟಣ ವೃತ್ತದ ಬೊಮ್ಮನಾಯಕನಹಳ್ಳಿಯಲ್ಲಿ ಗುರುವಾರ ನಡೆದಿದೆ. ಕೈಗಾರಿಕಾ ಪ್ರದೇಶದಲ್ಲಿ ಕ್ಯಾಂಟಿನ್ ನಡೆಸುತ್ತಿದ್ದ ಕುಮಾರ್ (36) ಎಂಬವರೇ ಕೊಲೆಯಾದ ವ್ಯಕ್ತಿ. ಎರಡು ದಿನಗಳ ಹಿಂದೆ ಮನೆಯಿಂದ ಹೊರ ಹೋಗಿದ್ದ ಆತನ ಮೃತದೇಹ ಗುರುವಾರ ಶವವಾಗಿ ಮನೆ ಬಾಗಿಲಲ್ಲಿ ತಂದು ಹಾಕಲಾಗಿತ್ತು. ಮೃತರಿಗೆ ಇಬ್ಬರು ಮಕ್ಕಳಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement