ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತಾಂತ್ರಿಕ ಕಾರಣ ನವಿಲೆ ಅರ್ಧ ನೀರು ಬಳಕೆಯಾಗುತ್ತಿಲ್ಲ

Rashmi Kasaragodu
Updated On : 9 Aug 2013, 12:20 pm

ಕ.ಪ್ರ.ವಾರ್ತೆ   ಚನ್ನರಾಯಪಟ್ಟಣ   ಆ.8
ತಾಲೂಕಿನ ಹೃದಯ ಭಾಗದಲ್ಲಿ ಹಾದು ಹೋಗಿರುವ ನವಿಲೆ ಏತ ನೀರಾವರಿ ಯೋಜನೆಯಲ್ಲಿ ಕೆಲ ತಾಂತ್ರಿಕ ಕಾರಣಗಳಿಂದ ಅಗತ್ಯವಿರುವಷ್ಟು ನೀರನ್ನು ಅಚ್ಚುಕಟ್ಟು ಪ್ರದೇಶಕ್ಕೆ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ತಾಲೂಕಿನ ನವಿಲೆ ಏತ ನೀರಾವರಿ ಯೋಜನೆಯ ವಾರ್ಷಿಕ ನೀರೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಬಾಗೂರು ಹಾಗೂ ನವಿಲೆ ಏತ ನೀರಾವರಿ ಯೋಜನೆಯಡಿಯಲ್ಲಿ 106 ಕ್ಯುಸೆಕ್ ನೀರನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ ತಾವು ಕೆಲ ತಾಂತ್ರಿಕ ಕಾರಣಗಳಿಂದ ಅರ್ಧದಷ್ಟು ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ ಎಂದು ತಿಳಿಸಿದರು.
ಏತ ನೀರಾವರಿಗೆ ಅಳವಡಿಸಿರುವ ಪೈಪ್ಲೈನ್ಗಳು ಹಾಗೂ ನಾಲೆಗಳ ಕಾಮಗಾರಿ ಪೂರ್ಣಗೊಳ್ಳದಿರುವುದು ಸೇರಿದಂತೆ ಸಮರ್ಪಕ ವಿದ್ಯುತ್ ಸರಬರಾಜಿಲ್ಲದ ಕಾರಣ ನೀರಿನ ಬಳಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಕಲ್ಲೆಸೋಮನಹಳ್ಳಿ ಏತ ನೀರಾವರಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಸಲುವಾಗಿ ನೀಲನಕ್ಷೆಯನ್ನು ತಯಾರಿಸಲು ಖಾಸಗಿ ಕಂಪನಿಗೆ ವಹಿಸಿದ್ದು, ತಾಂತ್ರಿಕ ಒಪ್ಪಿಗೆ ಸಿಕ್ಕಿದ ನಂತರ ಕಾಮಗಾರಿಗೆ ಟೆಂಡರ್ ಕರೆಯುವ ಕಾರ್ಯಕ್ಕೆ ಮುಂದಾಗಲಾಗುವುದು. ಓಬಳಾಪುರ ಏತ ನೀರಾವರಿ ಕಾಮಗಾರಿಯ ಎಲ್ಲಾ ಕಾರ್ಯಗಳು ಪೂರ್ಣಗೊಂಡಿದ್ದು, ವಿದ್ಯುತ್ ಟಿಸಿ ಸಂಪರ್ಕ ಕಲ್ಪಿಸಲು ಒಂದು ವಾರದ ಸಮಯ ಕೇಳಿದ್ದಾರೆ ಎಂದು ತಿಳಿಸಿದರು.
ನುಗ್ಗೇಹಳ್ಳಿ ಏತ ನೀರಾವರಿ ಕಾಮಗಾರಿ ಪ್ರಾರಂಭಕ್ಕೆ ಟೆಂಡರ್ ಕರೆಯುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜುಟ್ಟನಹಳ್ಳಿ ಹಾಗೂ ಹಿರೀಸಾವೆ ಏತ ನೀರಾವರಿ ಕಾಮಗಾರಿ ಮಂಜೂರಾತಿಗೆ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸುವ ಜತೆಗೆ ನೀರಾವರಿ ಸಲಹಾ ಸಮತಿ ಸಭೆಯಲ್ಲಿ ಒಪ್ಪಿಗೆ ಪಡೆಯಲು ಹೋರಾಟ ನಡೆಸುವುದಾಗಿ ತಿಳಿಸಿದರು.  ನಾಗೇಶ್ವರ ಏತ ನೀರಾವರಿ ಬಳಕೆದಾರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ನವಿಲೆ ಏತ ನೀರಾವರಿ ಯೋಜನೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಲು ಸಾಧ್ಯವಾಗುತ್ತಿಲ್ಲ. ಉಳಿಕೆ ಕಾಮಗಾರಿ ನಿರ್ವಹಿಸಲು ಇಲಾಖೆಯಿಂದ ಹಣ ನೀಡದ ಕಾರಣ ಸಂತೆ ಶಿವರ ಹಾಗೂ ಸುತ್ತ ಮುತ್ತಲಿನ ಪ್ರದೇಶಕ್ಕೆ ನೀರು ನೀಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಕಾಮನಾಯಕನಹಳ್ಳಿ ಬಳಿ ಸೇತುವೆ ನಿರ್ಮಿಸುವುದು ಅಥವಾ ಮೇಲು ಸೇತುವೆ ನಿರ್ಮಿಸಿದರೆ ಮಾತ್ರ ಸಂತೆ ಶಿವರ ಕೆರೆಗೆ ನೀರೊದಗಿಸಲು ಸಾಧ್ಯವಿದ್ದು, ಈ ಬಗ್ಗೆ ನೀರಾವರಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿ ಕಾರ್ಯ ಮಾಡುವ ಸಂದರ್ಭದಲ್ಲಿ ಸಂಘ ಸಂಸ್ಧೆಗಳು ರಾಜಕೀಯವನ್ನು ಬಳಸದೆ ಸಂಘ ಹಾಗೂ ಜನತೆಯ ಹಿತದೃಷ್ಟಿ ಮುಖ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಶಿವಶಂಕರ್ ಕುಂಠೆ, ತಾಲೂಕು ಪಂಚಾಯಿತಿ ಸದಸ್ಯ ಬಸವರಾಜು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಪ್ಪ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಶಿವಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement