ಮಳೆಯಿಂದ 24 ಕೋಟಿ ನಷ್ಟ, 3820 ಹೆಕ್ಟೇರ್ ಬೆಳೆ ನಾಶ
ಕ.ಪ್ರ.ವಾರ್ತೆ ಹಾಸನ ಆ. 8
ಜಿಲ್ಲೆಯಲ್ಲಿ ಹಲವು ದಿನಗಳಿಂದ ಸುರಿದ ಅಧಿಕ ಮಳೆಯಿಂದ ಮನೆಗಳು ಹಾಗೂ ಸಾರ್ವಜನಿಕ ಮೂಲಭೂತ ಸೌಕರ್ಯಗಳು ಹಾನಿಗೊಳಗಾಗಿದ್ದು, ಸಂಬಂಧಪಟ್ಟ ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳು ಹಾಗೂ ನಾನಾ ಇಲಾಖೆಗಳಿಂದ ಹಾನಿಯಾಗಿರುವ ಬಗ್ಗೆ ಮಾಹಿತಿ ಪಡೆದು ನಷ್ಟದ ಅಂದಾಜು ಮಾಡಲಾಗಿದೆ.
ಜಿಲ್ಲಾಧಿಕಾರಿ ಅನ್ಬುಕುಮಾರ್ ಅವರ ಪ್ರಕಾರ ಜಿಲ್ಲಾದ್ಯಂತ ಹಾನಿ ಆಗಿರುವ ವಿವರ ಹೀಗಿದೆ. ಜಿಲ್ಲೆಯಲ್ಲಿ ಒಟ್ಟು 24.47 ಕೋಟಿ 5 ಲಕ್ಷ ರು. ನಷ್ಟವಾಗಿದೆ. ಅದರಂತೆ 3820 ಹೆಕ್ಟೇರ್ ಬೆಳೆ ಹಾಳಾಗಿದ್ದು, ಇದರಿಂದ 6.90 ಕೋಟಿ ಲಕ್ಷ ರು. ನಷ್ಟವಾಗಿದೆ. 688.45 ಕಿ.ಮೀ. ರಸ್ತೆ ಹಾಳಾಗಿದ್ದು, ನಷ್ಟ 1500.25 ಲಕ್ಷ ರು., 17 ಸೇತುವೆ ಹಾಗೂ ಮೋರಿಯಿಂದ 183.90 ಲಕ್ಷ ರು, 1 ಕೆರೆ ಹಾಳಾಗಿ 5 ಲಕ್ಷ ರು. 116 ಸರ್ಕಾರಿ ಕಟ್ಟಡಗಳ ಕುಸಿತದಿಂದ 77.90 ಲಕ್ಷ ರು. 328 ಮನೆಗಳು ಹಾಳಾಗಿವೆ. ಅತಿವೃಷ್ಟಿಯಿಂದ ವ್ಯಕ್ತಿ ಮೃತಪಟ್ಟಿದ್ದಾನೆ.
ಮೇಲ್ಕಂಡ ಹಾನಿಯಾಗಿರುವ 328 ಮನೆಗಳ ಪೈಕಿ 95 ಮನೆಗಳಿಗೆ 3,37,300 ರು.ಗಳನ್ನು ಸಂತ್ರಸ್ಥರಿಗೆ ಈಗಾಗಲೇ ಪರಿಹಾರ ವಿತರಣೆ ಮಾಡಲಾಗಿದ್ದು ಉಳಿದಂತೆ ಕೂಡಲೇ ಪರಿಹಾರ ವಿತರಣೆ ಮಾಡುವಂತೆ ಸಂಬಂಧಪಟ್ಟ ತಹಸೀಲ್ದಾರ್ರವರಿಗೆ ನಿರ್ದೇಶನ ನೀಡಲಾಗಿದೆ. ಮನೆ ಹಾನಿ ಬಗ್ಗೆ ವಿತರಿಸಲಾಗಿರುವ ಪರಿಹಾರದ ವಿವರ ಇಂತಿದೆ.
ಹಾಸನ ತಾಲೂಕಿನ 29 ಪ್ರಕರಣಗಳಲ್ಲಿ 98,100 ಲಕ್ಷ ರು, ಸಕಲೇಶಪುರದ 32 ಪ್ರಕರಣಗಳಲ್ಲಿ 1,25,300 ಲಕ್ಷ ರು, ಅರಕಲಗೂಡಿನ 34 ಪ್ರಕರಣಗಳಲ್ಲಿ 1,13,900 ಲಕ್ಷ ರು. ಸೇರಿದಂತೆ ಒಟ್ಟು 95 ಪ್ರಕರಣಗಳಲ್ಲಿ 3,37,300 ಲಕ್ಷ ರು. ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ರಸ್ತೆ, ಸೇತುವೆಗಳು, ಕೆರೆಗಳು, ಸರ್ಕಾರಿ ಕಟ್ಟಡ, ಬೆಳೆಗಳು ಸಹ ಹಾನಿಗೊಳಗಾಗಿದ್ದು ಈಗಾಗಲೇ ಬೆಳೆಗಳಿಗೆ ಸಂಬಂಧಿಸಿದಂತೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯವರ ಸಹಯೋಗದೊಂದಿಗೆ ಬೆಳೆಗಳು ಹಾನಿಯಾಗಿರುವ ಬಗ್ಗೆ ಕೂಡಲೇ ಪರಿಶೀಲಿಸಿ ಪರಿಹಾರ ವಿತರಿಸುವಂತೆ ಸೂಚನೆ ನೀಡಲಾಗಿದೆ.
ಸಕಲೇಶಪುರ ಕ್ಷೇತ್ರಕ್ಕೆ 175 ಲಕ್ಷ ರು, ಹೊಳೆನರಸೀಪುರ, ಹಾಸನ, ಅರಕಲಗೂಡು, ಬೇಲೂರು ತಾಲೂಕುಗಳಿಗೆ ತಲಾ 25 ಲಕ್ಷ ರು. ಅನುದಾನವನ್ನು ಮರುಹಂಚಿಕೆ ಮಾಡಲಾಗಿದೆ. ಒಟ್ಟು 275 ಲಕ್ಷ ರು. ಮರು ಹಂಚಿಕೆ ಮಾಡಲಾಗಿದೆ.
ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದು ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.