ರಕ್ತದಾನದಿಂದ ಜೀವ ರಕ್ಷಣೆ: ವೀರಭದ್ರಪ್ಪ
ಹಾಸನ: ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದರಿಂದ ಸಂಕಷ್ಟದಲ್ಲಿರುವ ಜೀವಗಳ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಸ್ಕೌಟ್ಸ್ ಮುಖ್ಯ ಆಯುಕ್ತ ಡಾ.ವೈ.ಎಸ್.ವೀರಭದ್ರಪ್ಪ ನುಡಿದರು. ನಗರದ ಡಿ.ದೇವರಾಜು ಅರಸು ಭವನದಲ್ಲಿ ಸರಸ್ವತಿ ಮಹಿಳಾ ಕಲಾ ಸಮಾಜ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ಸಂಸ್ಥೆ ಜಿಲ್ಲಾ ಘಟಕ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಉಚಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನ ಬಹಳ ಶ್ರೇಷ್ಟ. ಮಹಿಳೆಯರು ಸಹ ರಕ್ತದಾನಕ್ಕೆ ಮುಂದೆ ಬಂದಿರುವುದು ಉತ್ತಮ ಬೆಳವಣಿಗೆ ಎಂದರು. ಮಲ್ನಾಡ್ ನರ್ಸಿಂಗ್ ಹೋಮ್ನ ಸ್ತ್ರೀ ರೋಗ ತಜ್ಞೆ ಡಾ.ಸಾವಿತ್ರಿ ಮಾತನಾಡಿ, ಒಂದು ಕುಟುಂಬವು ಆರೋಗ್ಯವಾಗಿರಬೇಕಾದರೆ ಆ ಕುಟುಂಬದ ಗೃಹಿಣಿಯ ಆರೋಗ್ಯ ಅತೀ ಮುಖ್ಯ ಎಂದು ಹೇಳಿದರು. ಅನನ್ಯ ಟ್ರಸ್ಟಿನ ಅಧ್ಯಕ್ಷ ಕೆ.ಟಿ.ಜಯಶ್ರೀ ಮಾತನಾಡಿ, ಮಹಿಳೆಯರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು. ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಬೇಕು, ಮಕ್ಕಳನ್ನು ಕಾಳಜಿಯಿಂದ ಸಲಹಬೇಕು ಎಂದು ಹೇಳಿದರು. ಶಿಬಿರದಲ್ಲಿ ಜಯಚಾಮರಾಜೇಂದ್ರ ಆಸ್ಪತ್ರೆಯ ಸಿಬ್ಬಂದಿ ಸಹಕಾರ ನೀಡಿದರು. ಹತ್ತಕ್ಕೂ ಹೆಚ್ಚು ಮಂದಿ ರಕ್ತದಾನದಲ್ಲಿ ಭಾಗವಹಿಸಿದ್ದರು. ನಗರಸಭೆ ಸದಸ್ಯ ಕುಮಾರ್, ಹಂಗರಹಳ್ಳಿ ಭೀಮನಾಯಕ್, ಸುಧಾ ರವಿಕುಮಾರ್, ವೈ.ಬಿ.ಬಿ.ಕಾಂತರಾಜು ಇತರರು ಇದ್ದರು.