ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆಯಿಂದ ಜಾಗೃತಿ ಗ್ರಾಮ ಆಂದೋಲನ
ಕ.ಪ್ರ.ವಾರ್ತೆ ಹಾಸನ ಆ. 8
ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲು ಆ.10 ರಿಂದ ಆ.30ರವರೆಗೂ ರೈತರ ಜಾಗೃತಿ ಗ್ರಾಮ ಆದೋಲನ ಹಾಗೂ ದೆಹಲಿ ಚಲೋ ರ್ಯಾಲಿ ನಡೆಸುವುದಾಗಿ ಭಾರತೀಯ ಕಿಸಾನ್ ಸಂಘದ ಹಾಸನ ಶಾಖೆಯ ಉಪಾಧ್ಯಕ್ಷ ರಾಜೀವ್ಗೌಡ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಶೋಷಣೆ ವಿರುದ್ಧ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಸೆ.13ರಂದು ದೆಹಲಿಯ ರಾಮಲೀಲ ಮೈದಾನದಲ್ಲಿ ಮೂರು ಲಕ್ಷ ರೈತರ ಶೇರ್ಬನೋ ದಿಲ್ಲಿ ಚಲೋ ಎಂಬ ಕರೆಯೊಂದಿಗೆ ಪ್ರತಿಭಟನಾ ರ್ಯಾಲಿ ನಡೆಸಲಾಗುತ್ತದೆ ಎಂದು ಹೇಳಿದರು.
ಇದರ ಅಂಗವಾಗಿ ರಾಜ್ಯದ ಸಹಸ್ರಾರು ಗ್ರಾಮಗಳಲ್ಲಿ ಸೈಕಲ್ ಜಾಥ, ಬೈಕ್ ರ್ಯಾಲಿ ಹಾಗೂ ಲಕ್ಷಾಂತರ ಕರಪತ್ರ ಹಂಚುವಂತಹ ಕಾರ್ಯಕ್ರಮ ರೂಪಿಸಲಾಗಿದೆ. ಆಗಸ್ಟ್ 10 ರಂದು ಎಲ್ಲಾ ಜಿಲ್ಲೆಗಳಲ್ಲಿ ಈ ರೈತ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಲಾಗುವುದು.
ಸೆಪ್ಟೆಂಬರ್ 13 ರಂದು ದೆಹಲಿಯಲ್ಲಿ ನಡೆಯಲಿರುವ ರ್ಯಾಲಿಗೆ ಸಿಂಹಗಳಾಗಿ ದೆಹಲಿಗೆ ನಡೆಯಿರಿ ಎಂಬ ಘೋಷಣೆಯಲ್ಲಿ ರಾಜ್ಯದಿಂದ 2 ಸಾವಿರ ರೈತರು ಪಾಲ್ಗೊಳ್ಳುವರು.
ರೈತ ಬೆಳೆದ ಬೆಳೆಗಳಿಗೆ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಕನಿಷ್ಠ ಶೇ. 30 ರಷ್ಟು ಲಾಭದಾಯಕ ಬೆಲೆ ನಿಗದಿ ಮಾಡಬೇಕು. ಕುಡಿಯುವ ನೀರಿನ ಆದ್ಯತೆ ಬಳಿಕ ಕೃಷಿಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ನಾನಾ ಸಮಸ್ಯೆಯ ಪರಿಹಾರಕ್ಕಾಗಿ ಇಂತಹ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ತಮ್ಮಪ್ಪಗೌಡ, ಪ್ರಾಂತ ಕಾರ್ಯಕಾರಿಣಿ ಸದಸ್ಯ ವೈ.ಎಂ. ರಾಜು ಇದ್ದರು.