ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೈದ್ಯರ ಕೊರತೆ, ಸಮಸ್ಯೆ ಆಗರವೀ ಆಸ್ಪತ್ರೆ

Rashmi Kasaragodu
Updated On : 9 Aug 2013, 12:17 pm

ಅ.ರಾ. ಸುಬ್ಬರಾವ್
ಅರಕಲಗೂಡು: ತಾಲೂಕು ಕೇಂದ್ರದಲ್ಲಿರುವ ಈ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿ ಹಲವು ವರ್ಷಗಳೇ ಆಯ್ತು. ಆದರೆ ಇಲ್ಲಿನ ಮೂಲಭೂತ ಸಮಸ್ಯೆಗಳಿಗೆ ಮಾತ್ರ ಪರಿಹಾರ ದೊರೆತಿಲ್ಲ.
ಈ ಆಸ್ಪತ್ರೆಯ ಕತೆ ಹಲ್ಲಿದ್ದರೆ ಕಡಲೆ ಇಲ್ಲ, ಕಡಲೆ ಇದ್ದರೆ ಹಲ್ಲಿಲ್ಲ ಎನ್ನುವಂತಾಗಿದೆ. ಇಲ್ಲಿನ ಕೀಲು ಮತ್ತು ಮೂಳೆ ವೈದ್ಯರು ವರ್ಗಾವಣೆಗೊಂಡು ತಿಂಗಳುಗಳೇ ಕಳೆದಿವೆ. ಆದರೆ ಈ ಜಾಗಕ್ಕೆ ಬೇರೆ ವೈದ್ಯರು ಬಂದಿಲ್ಲ. ಈ ಹಿಂದೆ ಈ ವಿಷಯದ ವೈದ್ಯರು ಇದ್ದರಾದರೂ ಬಹುಕಾಲ ಕ್ಷ-ಕಿರಣ ಸೌಲಭ್ಯ ಇರಲಿಲ್ಲ. ಪ್ರಸ್ತುತ ಆ ವ್ಯವಸ್ಥೆ ಲಭ್ಯವಿದೆ ಆದರೆ ವೈದ್ಯರಿಲ್ಲ. ಇದರಿಂದ ಕೀಲು ಮತ್ತು ಮೂಳೆ ರೋಗಿಗಳು ಹೋಬಳಿ ಕೇಂದ್ರವಾದ ಕೊಣನೂರು ಇಲ್ಲವೇ ಜಿಲ್ಲಾ ಕೇಂದ್ರ ಹಾಸನಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ.
ಇನ್ನು ಈ ಆಸ್ಪತ್ರೆಯಲ್ಲಿ ಈವರೆಗೆ ಇದ್ದುದು ಕೇವಲ ಒಬ್ಬ ವೈದ್ಯ. ಡಾ.ಯೋಗೇಶ್ ಒಬ್ಬರೇ ಇಲ್ಲಿನ ಹುದ್ದೆಯಲ್ಲಿರುವ ವೈದ್ಯರು. ಉಳಿದಂತೆ ಎಲ್ಲರೂ ಕೇರಳಾಪುರ ಮತ್ತು ಕೊಣನೂರಿನಿಂದ ನಿಯೋಜನೆಗೊಂಡಿರುವವರೇ. ರಾತ್ರಿ ಪಾಳಿಯಲ್ಲಿ ಉಳಿಯುವ ವೈದ್ಯರುಗಳಿಲ್ಲದೇ ತೊಂದರೆ ಪಡುವಂತಾಗಿದೆ. ಅಷ್ಟೆ ಅಲ್ಲ ಇಲ್ಲಿಗೆ ಡಾ.ರೇವಣ್ಣ ಎಂಬ ಸರ್ಜನ್ ಇತ್ತೀಚೆಗೆ ವರ್ಗಾವಣೆಗೊಂಡು ಬಂದಿದ್ದಾರೆ. ಆದರೆ ಅವರಿಗೆ ಇಲ್ಲಿ ಅನಸ್ತೇಷಿಯಾ ನೀಡುವ ವೈದ್ಯರು ಇಲ್ಲದ ಕಾರಣದಿಂದ ಅವರು ಯಾವುದೇ ಚಿಕಿತ್ಸೆ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ.
ಇಲ್ಲಿ ಮಹಿಳಾ ವೈದ್ಯರ ಹುದ್ದೆಯಲ್ಲಿ ವೈದ್ಯರು ಇದ್ದಾರಾದರೂ ಅವರು ಬಹುದಿನಗಳ ರಜೆಯ ಮೇಲೆ ತೆರಳಿರುವುದರಿಂದ ಅವರ ಸೇವೆ ಈ ಆಸ್ಪತ್ರೆಯಲ್ಲಿ ಲಭ್ಯವಾಗುತ್ತಿಲ್ಲ. ವೈದ್ಯರ ಕೊರತೆಯಿಂದಾಗಿ ಸಾರ್ವಜನಿಕರು ಜಿಲ್ಲಾ ಕೇಂದ್ರವಾದ ಹಾಸನಕ್ಕೆ ತೆರಳಬೇಕಾದ ಇಲ್ಲವೇ ಖಾಸಗಿ ಕ್ಲಿನಿಕ್ಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಕುಡಿಯುವ ನೀರಿನ ಸಮಸ್ಯೆ: ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಕಟ್ಟಡದ ಕೆಲ ಭಾಗಗಳು ಈಗಾಗಲೇ ಸೋರುತ್ತಿದ್ದು ಅದರ ದುರಸ್ತಿ ಆಗಬೇಕಿದೆ. ಈ ನಡುವೆ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತವಾಗಿಬಿಟ್ಟರೆ ದೇವರೇ ಗತಿ. ವಿಶಾಲವಾದ ಆಸ್ಪತ್ರೆಯಲ್ಲಿ ಜನರೇಟರ್ ಕೆಟ್ಟು ನಿಂತು ಅದೆಷ್ಟೋ ವರ್ಷಗಳೇ ಆಗಿಬಿಟ್ಟಿದೆ. ಆದರೆ ಈ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಂಡಂತಿಲ್ಲ. ಈ ಬಗ್ಗೆ ಹಲವು ಬಾರಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಇಲ್ಲಿಯ ಸಿಬ್ಬಂದಿ ಅಂಬೋಣ.
ರಾತ್ರಿ ವೇಳೆ ಒಬ್ಬ ವೈದ್ಯ, ಒಬ್ಬ ನರ್ಸ್ ಮತ್ತು ಒಬ್ಬ ಡಿ-ದರ್ಜೆ ನೌಕರ ಮಾತ್ರ ಕರ್ತವ್ಯದಲ್ಲಿರುತ್ತಾರೆ. ರಾತ್ರಿ ವಿದ್ಯುತ್ ಕಡಿತವಾಗಿಬಿಟ್ಟರೆ ಭಯವಾಗುತ್ತದೆ ಎನ್ನುತ್ತಾರೆ ಇಲ್ಲಿಯ ಸಿಬ್ಬಂದಿ. ಸಿಬ್ಬಂದಿಯೇ ಹೀಗೆನ್ನುವಾಗ ರೋಗಿಗಳ ಪಾಡು ಏನು ಎಂಬುದನ್ನು ಹಿರಿಯ ಅಧಿಕಾರಿಗಳು ಮನವರಿಕೆ ಮಾಡಿಕೊಳ್ಳಬೇಕಿದೆ.
ಒಟ್ಟಾರೆ ತಾಲೂಕು ಕೇಂದ್ರದಲ್ಲಿರುವ ಈ ಸರ್ಕಾರಿ ಆಸ್ಪತ್ರೆಗೆ ಕಾಯಕಲ್ಪ ರೂಪಿಸಿ ತಾಲೂಕಿನ ನಾನಾ  ಕಡೆಗಳಿಂದ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement