ಹೊಳೆನರಸೀಪುರದಲ್ಲಿ ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ
ಕ.ಪ್ರ.ವಾರ್ತೆ ಹೊಳೆನರಸೀಪುರ ಆ.8
ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿಯಲ್ಲಿ ಮೈಸೂರಿನ ಭಾರತ್ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆ ಹಾಗೂ ಅಪೋಲೋ ಬಿಜಿಎಸ್ ಆಸ್ಪತ್ರೆ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಆಶ್ರಯದಲ್ಲಿ ವಿಶೇಷವಾಗಿ ಬಿಪಿಎಲ್, ಅಕ್ಷಯ ಅನಿಲ ರಹಿತ, ಅಂತ್ಯೋದಯ ಕಾರ್ಡ್ದಾರರಿಗೆ ಕ್ಯಾನ್ಸರ್ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಆಂಕಾಲಜಿಸ್ಟ್ ಡಾ.ಶ್ರೀವಾಣಿ ಹಾಗೂ ತಂಡವು ಶಿಬಿರದಲ್ಲಿ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಸ್ತನದಲ್ಲಿ ಊತ, ಗಂಟು ಅಥವಾ ಶರೀರದ ಯಾವುದೇ ಭಾಗದಲ್ಲಿ ಗಡಸುತನ, ರಕ್ತಸ್ರಾವ, ಮಲ, ಮೂತ್ರ, ವಾಂತಿ ಇವುಗಳಲ್ಲಿ ರಕ್ತ, ಯೋನಿಯಿಂದ ಅಸ್ವಾಭಾವಿಕ ರಕ್ತ ಸ್ರಾವ, ಒಂದು ತಿಂಗಳ ಮೇಲ್ಪಟ್ಟು ಬಾಯಿ, ಚರ್ಮ ಅಥವಾ ಶರೀರದ ಯಾವುದೇ ಭಾಗದಲ್ಲಿ ಗಾಯ ಅಥವಾ ವಾಸಿಯಾಗದೆ ಇರುವ ಹುಣ್ಣು, ನುಂಗುವಾಗಿನ ತೊಂದರೆ ಅಥವಾ ತಡೆತ, ಗಂಟಲಲ್ಲಿ ಉರಿತ, ನೋವು ಅಥವಾ ಧ್ವನಿ ಬದಲಾವಣೆ ಮೊದಲಾದ ಸಮಸ್ಯೆಗಳ ಕುರಿತಂತೆ ವಿಶೇಷ ತಪಾಸಣೆ ನಡೆಸಿತು.
ಅಲ್ಲದೇ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ ತಜ್ಞ ವೈದ್ಯರ ತಂಡವು ವೈದ್ಯಕೀಯ ಉಪಕರಣಗಳ ನೆರವಿನಿಂದ ಶಿಬಿರದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಿಗೆ ಹೃದಯ ರೋಗ, ನರರೋಗ, ಅಪಘಾತ, ಸುಟ್ಟಗಾಯ, ಚಿಕ್ಕ ಮಕ್ಕಳ ಕಾಯಿಲೆಗಳಿಗೆ ಸಂಬಂಧಿಸಿದಂತೆ ತಪಾಸಣೆ ನಡೆಸಲಾಯಿತು.
ಅಲ್ಲದೆ ಅವಶ್ಯಕತೆ ಇರುವ ರೋಗಿಗಳನ್ನು ಉನ್ನತವಾದ ಚಿಕಿತ್ಸೆಗಾಗಿ ಮೈಸೂರಿನಲ್ಲಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ಬರುವಂತೆ ತಿಳಿಸಲಾಯಿತು. ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಔಷಧ, ಊಟ, ಚಿಕಿತ್ಸೆಯ ನಂತರ ಪ್ರಯಾಣ ಭತ್ಯೆಯನ್ನು ಮರುಪಾವತಿ ಮಾಡಲಾಗುವುದು, ಈ ಎಲ್ಲಾ ಖರ್ಚುಗಳನ್ನೂ ಸರ್ಕಾರವೇ ಭರಿಸಲಿದೆ ಎಂದು ಭಾರತ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ನಿಶಾಂತ್ ತಿಳಿಸಿದರು.
ಶಿಬಿರದಲ್ಲಿ ನೂರಾರು ಜನರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಆಲ್ಬರ್ಟ್ ಹಾಗೂ ನಾನಾ ತಜ್ಞ ವೈದ್ಯರು ಇದ್ದರು.