ಆಂಜನೇಯ ದೇಗುಲ ನೂತನ ಕಳಸ ಪ್ರತಿಷ್ಠಾಪನೆ ಇಂದು
ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿಯ ಎಸ್.ಕಸುವನಹಳ್ಳಿಯಲ್ಲಿ ನಿರ್ಮಿಸಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ನೂತನ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮವು ಆ.10 ರಂದು ನಡೆಯಲಿದ್ದು, ಕೆಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಮಯ 12ಕ್ಕೆ ಧಾರ್ಮಿಕ ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದೇವಾಲಯದ ಮುಖ್ಯಸ್ಥ ಗುಡಿಗೌಡರಾದ ರಂಗನಾಥ್ ತಿಳಿಸಿದ್ದಾರೆ.
ದಿವ್ಯ ಸಾನಿಧ್ಯವನ್ನು ಸುಕ್ಷೇತ್ರ ಕೆರಗೋಡಿ ರಂಗಾಪುರದ ಗುರುಪರದೇಶಿಕೇಂದ್ರ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ವಹಿಸಲಿದ್ದು ಸಾಹಿತಿ ಚಟ್ಟನಹಳ್ಳಿ ಮಹೇಶ್, ದಿಬ್ಬದಹಳ್ಳಿ ಶ್ಯಾಮಸುಂದರ್, ಉಪನ್ಯಾಸಕ ಕೆ.ಎಸ್.ಹರಶಿವಮೂರ್ತಿ ಆಗಮಿಸಲಿದ್ದಾರೆ.
ಬಿಂದು ಮಾಧವ ಶರ್ಮಾ ಸ್ವಾಮೀಜಿ ಅಭಯ ಹಸ್ತದ ಮೂಲಕ ಕಳಸ ಸ್ಥಾಪನೆ ನೆರವೇರಲಿದೆ. ಎನ್.ಹೆಚ್.234ರ ಹೆದ್ದಾರಿಯ ಬಾಣಾವರ ಕಣಕಟ್ಟೆಯ ರಸ್ತೆಯ ಬಲಭಾಗದ ಒಂದೂವರೆ ಕಿ.ಮೀ. ಇರುವ ಈ ಎಸ್.ಕಸುವನಹಳ್ಳಿ ಧಾರ್ಮಿಕ ನೆಲೆಬೀಡಾಗಿದೆ.
ಪ್ರತಿವರ್ಷ ಈ ದೇವಸ್ಥಾನದ ವತಿಯಿಂದ ಪೂಜಾ ಕೈಂಕರ್ಯಗಳು ನಡೆಯಲಿದ್ದು ಹವನ ಹೋಮಗಳು ನಡೆಯಲಿದ್ದು ಗ್ರಾಮೀಣ ಪದ್ಧತಿಯಂತೆ ಪರೇವು ಮಾಡಿ ಅನ್ನದಾನ ನಡೆಯುವುದು. ಸುತ್ತಮುತ್ತಲಿನ ಗ್ರಾಮದೇವತೆಗಳನ್ನು ಕರೆಯಿಸಿ ದೇವತಾ ಪ್ರಾರ್ಥನೆ, ಪುಣ್ಯಾಹ ಅಂಕುರಾರ್ಪಣೆ, ರಕ್ಷಾಬಂಧನ, ವಾಸ್ತುಹೋಮ, ಪರ್ಯಾಗ್ನೀಕರಣ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದೊಡನೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ತಂಬಾಕು ಬ್ಯಾರನ್‌ಗೆ ಬೆಂಕಿ
ಹುಣಸೂರು: ತಂಬಾಕು ಹದ ಮಾಡುತ್ತಿದ್ದ ವೇಳೆ ಆಕಸ್ಮಿಕ ಬೆಂಕಿ ತಗುಲಿ ಸಿಂಗಲ್ ಬ್ಯಾರನ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಘಟನೆ ಕಡೆಮನುಗನಹಳ್ಳಿಯಲ್ಲಿ ಬುಧವಾರ ರಾತ್ರಿ ಜರುಗಿದೆ.ಹನಗೋಡಿಗೆ ಸಮೀಪದ ಕಡೆಮನುಗನಹಳ್ಳಿ ಗ್ರಾಮದ ರಾಜೇಗೌಡರ ಪತ್ನಿ ಲಕ್ಷ್ಮಮ್ಮರಿಗೆ ಸೇರಿದ್ದ ತಂಬಾಕು ಬ್ಯಾರನ್ ಸುಟ್ಟುಹೋಗಿದೆ.