ಬೀಳುವ ಸ್ಥಿತಿಯಲ್ಲಿ ಸೇತುವೆ; ಗ್ರಾಮಸ್ಥರ ಆತಂಕ
ಕ.ಪ್ರ.ವಾರ್ತೆ ಸಕಲೇಶಪುರ ಆ. 9
ದಶಕದ ಹಿಂದೆ ನಿರ್ಮಾಣಗೊಂಡಿದ್ದ ಅಲುವಳ್ಳಿ ಸೇತುವೆ ಶಿಥಿಲಗೊಂಡು, ಮುರಿದು ಬೀಳುವ ಹಂತದಲ್ಲಿದ್ದು ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅತಿಯಾಗಿ ಮಳೆ ಬೀಳುವ ಗ್ರಾಮಗಳಾದ ಅಲುವಳ್ಳಿ, ಕಡಗರವಳ್ಳಿ, ಹೊಸಳ್ಳಿ, ನೊದರಹಳ್ಳಿ, ನಡನಹಳ್ಳಿ, ಚೀರಿ, ಚಿನ್ನಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳು ಎತ್ತಿನಹಳ್ಳ ದಾಟಿಯೇ ಹೊರಜಗತ್ತಿಗೆ ಕಾಲಿಡ ಬೇಕಾಗಿದೆ.
ಮಳೆಗಾಲದಲ್ಲಿ ತುಂಬಿ ಹರಿಯುವ ಈ ನದಿ ದಾಟಿ ಬರುವುದು ಅಸಾಧ್ಯ. ಇದರಿಂದಾಗಿ 2001 ಕ್ಕೂ ಮುನ್ನ ಮಳೆಗಾಲದಲ್ಲಿ ಈ ಭಾಗದಲ್ಲಿರುವವರು ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳ ಬೇಕಾಗಿತ್ತು. ಆದರೆ ಈ ಗ್ರಾಮಗಳ ಪಾಲಿಗೆ ಆಶಾಕಿರಣವಾಗಿ ಮೂಡಿಬಂದವರು ಅಂದಿನ ರೇಲ್ವೆ ಸಚಿವ ಜಾಫರ್ ಷರೀಫ್ಅವರ ಆಪ್ತಕಾರ್ಯದರ್ಶಿಯಾಗಿದ್ದ ಬೈಕೆರೆ ನಾಗೇಶ್.
ಇವರ ವಿಶೇಷ ಆಸಕ್ತಿಯ ಫಲವಾಗಿ 2002-03 ರಲ್ಲಿ ರೇಲ್ವೆ ಇಲಾಖೆಯ ವಿಶೇಷ ಅನುದಾನ ಬಳಸಿ ಸುಮಾರು 15 ಲಕ್ಷ ರು. ವೆಚ್ಚದಲ್ಲಿ ಎತ್ತಿನಹೊಳೆಗೆ ಸೇತುವೆ ನಿರ್ಮಾಣವಾಗಿದ್ದರಿಂದ ಗ್ರಾಮಸ್ಥರು ಹತ್ತಾರು ವಾಹನಗಳನ್ನು ಕೊಂಡಿರುವುದಲ್ಲದೆ ಏಲಕ್ಕಿ,ಕಾಫಿ ತೋಟಗಳನ್ನು ಅಭಿವೃದ್ಧಿ ಗೊಳಿಸಿದ್ದರು.
ಆ.1 ರಂದು ಸುರಿದ ಧಾರಾಕಾರ ಮಳೆಗೆ ಎತ್ತಿನಹೊಳೆ ತುಂಬಿ ಸೇತುವೆ ಮೇಲೆ ನೀರು ಹರಿದಿದ್ದರಿಂದಾಗಿ ಮಧ್ಯಭಾಗದಲ್ಲಿ ಸೇತುವೆ ಮುರಿದಿದ್ದು ವಾಹನ ಸಂಚಾರ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಹಜವಾಗಿಯೇ ಆತಂಕಕ್ಕೀಡಾಗಿರುವ ಗ್ರಾಮಸ್ಥರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.