ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಸತಿ ಶಾಲೆಗೆ ಲೋಕಾಯುಕ್ತ ಡಿವೈಎಸ್ಪಿ ಭೇಟಿ

Mainashree
Updated On : 9 Aug 2013, 11:30 am

ಕ.ಪ್ರ.ವಾರ್ತೆ  ಅರಕಲಗೂಡು  ಆ. 9
ಕನ್ನಡಪ್ರಭದಲ್ಲಿ ಪ್ರಕಟವಾದ ಕ್ಯಾಂಪೇನ್ ಸುದ್ದಿ ಪರಿಣಾಮ ಹಾಸನದ ಲೋಕಾಯುಕ್ತ ಡಿವೈಎಸ್ಪಿ ಶಿವರುದ್ರಪ್ಪ ಅವರು ಇಲ್ಲಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿ ಶಾಲೆಗೆ ಗುರುವಾರ ದಿಢೀರ್ ಭೇಟಿ ನೀಡಿದ್ದರು.
ಈ ವೇಳೆ ಸ್ಥಳದಲ್ಲಿದ್ದ ವರದಿಗಾರರಿಗೆ ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ಅಲ್ಲಿನ ವಾತಾವರಣವೇ ಬದಲಾಗಿತ್ತು. ಕೊಠಡಿಗಳಲ್ಲಿ ಅಲ್ಲಲ್ಲಿ ಇದ್ದ ಕಸದ ರಾಶಿಗಳು ಮಾಯವಾಗಿ ಸ್ವಚ್ಚಗೊಂಡಿತ್ತು. ಕಳೆದ ನಾಲ್ಕು ದಿನಗಳಿಂದ ಮಳೆ ಕಡಿಮೆ ಆಗಿರುವುದರಿಂದ ಮಕ್ಕಳ ಸ್ನಾನಕ್ಕೆ ಸೌರಶಕ್ತಿ ಬಳಸಿ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲೆ ಆರಂಭವಾಗಿ ಹಲವು ದಿನಗಳೆ ಕಳೆದಿದ್ದರೂ, ಪಡಿತರ ಕಲ್ಪಿಸದ ವಸತಿ ಶಾಲೆಯ ಉಗ್ರಾಣದಲ್ಲಿ ಪದಾರ್ಥಗಳ ಡಬ್ಬಗಳು ಭರ್ತಿಯಾಗಿದ್ದುವು. ಗುಣಮಟ್ಟದ ಪದಾರ್ಥಗಳು ಅಲ್ಲಿ ಲಭ್ಯವಾಗುವಂತಿದ್ದುವು.
ಅಡುಗೆ ತಯಾರಿಸುವ ಸ್ಥಳ ಸ್ವಚ್ಛವಾಗಿತ್ತು. ವಸತಿ ಶಾಲೆಯ ಪಕ್ಕದಲ್ಲೇ ಇದ್ದ ಚರಂಡಿಯನ್ನೂ ಸ್ವಚ್ಛಗೊಳಿಸಲಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಹಲವು ತಿಂಗಳುಗಳಿಂದ ಖಾಲಿ ಇದ್ದ ನರ್ಸ್ ಹುದ್ದೆ ಭರ್ತಿಯಾಗಿ, ಅಲ್ಲಿ ನರ್ಸ್ ಹಾಜರಾಗಿದ್ದರು.
ಎಲ್ಲವನ್ನೂ ಪರಿಶೀಲಿಸಿದ ಲೋಕಾಯುಕ್ತರು ಪ್ರಾಚಾರ್ಯ ರುದ್ರಪ್ಪ ಮತ್ತು ವಾರ್ಡನ್ ರಾಮಚಂದ್ರ ಅವರಿಗೆ ಕೆಲ ಸಲಹೆಗಳನ್ನೂ ನೀಡಿದರು. ಸ್ವಚ್ಛತೆಯನ್ನು ನಿರಂತರವಾಗಿ ಕಾಯ್ದುಕೊಳ್ಳುವಂತೆಯೂ, ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಸೂಚಿಸಿ ವಸತಿ ಶಾಲೆಯಲ್ಲಿರುವ ಮಕ್ಕಳಲ್ಲಿ ತಮ್ಮ ಮಕ್ಕಳನ್ನು ಕಾಣುವಂತಾದರೆ ಎಲ್ಲವೂ ಉತ್ತಮವಾಗಿರುತ್ತದೆ ಎಂದರು.
ಇದಕ್ಕೂ ಮುನ್ನ ಸಾರ್ವಜನಿಕರೊಬ್ಬರ ದೂರಿನನ್ವಯ ತಾಲೂಕು ಕಚೇರಿಗೆ ತೆರಳಿ ಹಲವು ದಾಖಲೆಗಳನ್ನು ಪರಿಶೀಲಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಮಲ್ಲಿಪಟ್ಟಣ ಹೋಬಳಿ ಹೆಗ್ಗಡಿಹಳ್ಳಿ ಗ್ರಾಮದಲ್ಲಿ ಒಂದೇ ಕುಟುಂಬಕ್ಕೆ ಮೂರು ಬಾವಿ ನೀಡಲಾಗಿದೆ ಎಂಬ ಪಾಂಡುರಂಗ ವಿಠಲ ಶೆಟ್ಟಿ ಎಂಬುವರ ದೂರಿನನ್ವಯ ಪರಿಶೀಲಿಸಿ ವರದಿ ನೀಡುವಂತೆ ತಹಸೀಲ್ದಾರ್ ಈಶ್ವರಪ್ಪ ಅವರಿಗೆ ಸೂಚಿಸಿದರು.  
ಅಧಿಕ ಕಾರ್ಡು ವಿತರಣೆ:  ತಾಲೂಕಿನಲ್ಲಿ 2011ರ ಜನಗಣತಿಯಂತೆ 48,729 ಕುಟುಂಬಗಳಿದ್ದು, ಈವರೆಗೆ 51,458 ಪಡಿತರ ಕಾರ್ಡುಗಳನ್ನು ವಿತರಿಸಲಾಗಿದೆ.ಇನ್ನೂ ಮೂರು ಸಾವಿರ ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ. ಇದು ಹೇಗೆ ಸಾಧ್ಯ  ಎಂದು  ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement