ಸುದ್ದಿ ಸಂಕ್ಷೇಪ
ಹೇಮಾವತಿ: 11,000 ಕ್ಯುಸೆಕ್ ಒಳ ಹರಿವು
ಹಾಸನ: ಮಲೆನಾಡು ಪ್ರದೇಶಗಳಾದ ಸಕಲೇಶಪುರ ಮತ್ತಿತರ ಕಡೆ ಮಳೆ ಕುಗ್ಗಿರುವ ಪರಿಣಾಮ ಹೇಮಾವತಿ ಜಲಾಶಯದ ಒಳ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಶುಕ್ರವಾರ ಜಲಾಶಯಕ್ಕೆ 11 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 5,021 ಸಾವಿರ ಕ್ಯುಸೆಕ್ ಹೊರ ಬಿಡಲಾಗುತ್ತಿದೆ.
ಇಂದಿನ ಮಟ್ಟ 2921.01 ಅಡಿಗಳು. ಗರಿಷ್ಠ ಮಟ್ಟ 2922 ಅಡಿಗಳು. ಜಲಾಶಯದಲ್ಲಿ ಈಗ 36.060 ಟಿಎಂಸಿ ನೀರಿದ್ದು, ಸಂಗ್ರಹ ಸಾಮರ್ಥ್ಯ 37.017 ಟಿಎಂಸಿ.
ಸಹಕಾರ ಸಂಘ ಚುನಾವಣೆ: ತರಬೇತಿ
ಹಾಸನ: ಸಹಕಾರ ಸಂಘಗಳಲ್ಲಿ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಚುನಾವಣೆ ಪ್ರಕ್ರಿಯೆ ಕುರಿತು ತರಬೇತಿ ನೀಡಲಾಯಿತು. ರಾಜ್ಯ ಸಹಕಾರ ಮಹಾ ಮಂಡಳಿ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆಗಳ ಸಂಯುಕ್ತಾಶ್ರಯಲ್ಲಿ ಚನ್ನರಾಯಪಟ್ಟಣ, ಅರಸೀಕೆರೆ ಮತ್ತು ಹೊಳೆನರಸೀಪುರ ತಾಲೂಕು ಸಹಕಾರ ಸಂಘಗಳಲ್ಲಿ ಚುನಾವಣೆ ನಡೆಯಲಿರುವ ಸಹಕಾರ ಸಂಘಗಳ ಚುನಾವಣಾಧಿಕಾರಿಗಳಿಗೆ ತರಬೇತಿ ನೀಡಲಾಯಿತು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ತರಬೇತಿ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಘಗಳ ಚುನಾವಣೆ ಸೆಪ್ಟಂಬರ್‌ನಲ್ಲಿ ನಡೆಯಲಿದೆ. ಸಹಕಾರ ಸಂಘಗಳ ಮಹತ್ವ ಹೆಚ್ಚಾಗಿದೆ. ಎಲ್ಲರೂ ಪ್ರಾಮಾಣಿಕ ಕಾರ್ಯನಿರ್ವಹಿಸುವಂತೆ ಸೂಚಿಸದ ಅವರು, ಹಣಕಾಸು ವ್ಯವಹಾರ ಜಿಲ್ಲಾ ಬ್ಯಾಂಕ್‌ಗಳ ಮೂಲಕವೇ ಆಗಬೇಕು ಎಂಬ ರಿಸರ್ವ್ ಬ್ಯಾಂಕ್ ಆದೇಶದಿಂದ ರೈತರಿಗೆ ಸ್ವಲ್ಪ ತೊಂದರೆ ಉಂಟಾಗಲಿದೆ. ಆದ್ದರಿಂದ ಹಿಂದಿನ ರೀತಿಯಲ್ಲೇ ಹಣಕಾಸು ವ್ಯವಹಾರ ನಡೆಸುವಂತಾಗಬೇಕು ಎಂದರು.
ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕ ಆರ್.ಟಿ. ದ್ಯಾವೇಗೌಡ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕಾರ್ಲೆ ಇಂದ್ರೇಶ್, ಸಹಕಾರ ಸಂಘಗಳ ಉಪ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಫ್, ನಿಬಂಧಕ ಎಂ.ಡಿ.ಪರಮೇಶ್, ಜಯರಾಂ ಇದ್ದರು.
ಮಧ್ಯಕಾಲೀನ ಭಾರತಇತಿಹಾಸ ಬಿಡುಗಡೆ
ಹಾಸನ: ರಾಷ್ಟ್ರದ ಜನತೆ ತನು, ಮನ, ಧನವನ್ನು ತ್ಯಾಗ ಮಾಡುವ ಮೂಲಕ ತೀವ್ರ ಹೋರಾಟ ನಡೆಸಿದ ಪರಿಣಾಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಇಷ್ಟೆಲ್ಲಾ ಹೋರಾಟ ನಡೆದು ಸ್ವಾತಂತ್ರ್ಯ ಗಳಿಸಿದ್ದರೂ ಇಂದಿಗೂ ಇತಿಹಾಸದ ಬಗ್ಗೆ ಪಾಠಗಳು ಕಡಿಮೆ ಇವೆ ಎಂದು ಜಿಲ್ಲಾ ಎಸ್ಪಿ ರವಿ. ಡಿ. ಚನ್ನಣ್ಣನವರ್ ವಿಷಾದಿಸಿದ್ದಾರೆ.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗ ಮತ್ತು ಶಾಂತಲಾ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಕ್ವಿಟ್ ಇಂಡಿಯಾ ದಿನಾಚರಣೆ ಮತ್ತು ಪ್ರೊ. ಸಿ.ಎನ್. ಲೋಕಪ್ಪಗೌಡರ ಮಧ್ಯಕಾಲೀನ ಭಾರತ ಇತಿಹಾಸ ಗ್ರಂಥದ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಭಾರತದ ಇತಿಹಾಸ ಮತ್ತು ಬದುಕನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇತಿಹಾಸ ವಿಜ್ಞಾನವಲ್ಲ ಇದು ಗತ ವೈಭವದ ಒಂದು ದಾಖಲೆ. ಇದನ್ನು ವಿಶ್ಲೇಷಿಸುವ ಶಕ್ತಿ ಪಡೆದು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಪಿ.ಎಸ್. ಶಂಕರನಾರಾಯಣ ಮಾತನಾಡಿ, ತಮ್ಮ ಜೀವನದಲ್ಲಿ ಹೋರಾಟ ನಡೆಸಿದ ವಿಚಾರವಾಗಿ ಹಂಚಿಕೊಂಡರು.
ಸ್ವಾತಂತ್ರ್ಯ ಪೂರ್ವದಲ್ಲಿ ನಾನು ಹೋರಾಟದಲ್ಲಿ ಭಾಗವಹಿಸಿ ಬಂಧನಕ್ಕೂ ಒಳಗಾಗಿದ್ದು, ಸಾಕಷ್ಟು ದೇಶಸೇವೆ ಮಾಡಿದವರಲ್ಲಿ ಮಹಾತ್ಮ ಗಾಂಧೀಜಿಯ ಸೇವೆ ನಿಸ್ವಾರ್ಥ ಆಗಿತ್ತು ಎಂದು ಹೇಳಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಸಿ.ಎನ್. ಲೋಕಪ್ಪಗೌಡರ ಮಧ್ಯಕಾಲೀನ ಭಾರತ ಇತಿಹಾಸ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು.ಇದೆ ವೇಳೆ ಸಕಾಂರಿ ವಸ್ತು ಸಂಗ್ರಹಾಲಯ ಕ್ಯುರೇಟರ್ ಕಾವ್ಯಶ್ರೀ, ಕಾಲೇಜಿನ ಪ್ರಾಂಶುಪಾಲ ಪ್ರೊ. .ಹೆಚ್.ಎನ್. ರೂಪರಾಜ್‌ಚಂದನ್ ಇದ್ದರು.