ಅತಿವೃಷ್ಟಿ: ತುರ್ತು ಪರಿಹಾರವಾಗಿ ರು. 1.75 ಕೋಟಿ ಬಿಡುಗಡೆ
ಕ.ಪ್ರ.ವಾರ್ತೆ ಸಕಲೇಶಪುರ ಆ.10
ಅತಿವೃಷ್ಟಿ ತುರ್ತು ಪರಿಹಾರವಾಗಿ ಕ್ಷೇತ್ರಕ್ಕೆ ಸರ್ಕಾರ 1.75 ಕೋಟಿ ರು. ಬಿಡುಗಡೆ ಮಾಡಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ತಿಳಿಸಿದರು. ಪಟ್ಟಣದ ಮಿನಿವಿಧಾನ ಸೌಧದಲ್ಲಿ ಅಗತ್ಯ ತುರ್ತು ಪರಿಹಾರ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಪಟ್ಟಿ ಸಿದ್ದಪಡಿಸಲು ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಸುಮಾರು 100 ಕೋಟಿ ರು.ಗೂ ಹೆಚ್ಚಿನ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ತುರ್ತುಪರಿಹಾರ ಧನವಾಗಿ 10 ಕೋಟಿ ಬಿಡುಗಡೆ ಮಾಡುವಂತೆ ವಿನಂತಿಸಲಾಗಿತ್ತು. ಆದರೆ ಸರ್ಕಾರ ಕನಿಷ್ಠ ಹಣ ಬಿಡುಗಡೆ ಮಾಡಿರುವುದರಿಂದ ಅತ್ಯಂತ ತುರ್ತು ಕಾಮಗಾರಿ ನಡೆಸ ಬೇಕಾಗಿರುವ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದರು.
35 ಕೋಟಿಗೂ ಹೆಚ್ಚಿನ ಲೋಕೋಪಯೋಗಿ ಹಾಗೂ ಜಿಪಂ ಸೇರಿದ ರಸ್ತೆ ಹಾಗೂ ಸೇತುವೆಗಳು ದುರಸ್ತಿಗೀಡಾಗಿದ್ದು ಕೆಲವೊಂದು ಗ್ರಾಮಗಳ ರಸ್ತೆ ಸಂಚರಿಸದಷ್ಟು ಹದಗೆಟ್ಟಿದ್ದರೆ, ಸೇತುವೆಗಳು ತುಂಡಾಗಿರುವುದರಿಂದ ಹೊರಪ್ರಪಂಚದ ಸಂಪರ್ಕವೇ ಸಾಧ್ಯವಿಲ್ಲ ಎಂಬ ಸನ್ನಿವೇಶ ಸೃಷ್ಟಿಯಾಗಿದೆ. ಭೂಕುಸಿತ ಸಂಭವಿಸಿ ನದಿ, ರಸ್ತೆಗಳಿಗೆ ಮಣ್ಣು ಬಿದ್ದಿದ್ದು ಇವುಗಳ ತೆರವು ಕಾರ್ಯಾಚರಣೆಗೆ ಸುಮಾರು 25 ಕೋಟಿ ರು. ಬೇಕಿದೆ ಎಂದು ಹೇಳಿದರು.
ತಾಲೂಕಿನಲ್ಲಿ 9.5 ಹೆಕ್ಟೆರ್ ಬತ್ತದ ಗದ್ದೆಗಳಿದ್ದು, ಸುಮಾರು 4550 ಹೆಕ್ಟೇರ್ ಬತ್ತದ ಗದ್ದೆಗಳಿಗೆ ಅತಿವೃಷ್ಟಿಯಿಂದ ಹಾನಿ ಸಂಭವಿಸಿದೆ. ಅಲ್ಲದೆ ಏಲಕ್ಕಿ, ಮೆಣಸು ಹಾಗೂ ಕಾಫಿ ಬೆಳೆಗೆ ಆಗಿರುವ ನಷ್ಟದ ವರದಿ ಇನ್ನೂ ಪೂರ್ಣಗೊಂಡಿಲ್ಲ ಎಂದು ವಿವರಿಸಿದರು. ತಹಸೀಲ್ದಾರ್ಬಾಬು ದೇವಾಡಿಗ ಸೇರಿದಂತೆ ಉನ್ನತ ಅಧಿಕಾರಿಗಳು ಇದ್ದರು.