ಪ್ಲಾಸ್ಟಿಕ್ ಬಾವುಟ ನಿಷೇಧ
ಹಾಸನ: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ನಗರದ ನಾಗರಿಕರನ್ನು ಜಿಲ್ಲಾಡಳಿತ ಆತ್ಮೀಯವಾಗಿ ಸ್ವಾಗತಿಸುತ್ತಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ. ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಂದರ್ಭಗಳಲ್ಲಿ ಖಾದಿ ವಸ್ತ್ರದಿಂದ ಅಥವಾ ಕೈಯಿಂದ ತಯಾರಿಸಲಾದ ಸ್ಪನ್ ಬಟ್ಟೆಗಳನ್ನು ಹೊರತುಪಡಿಸಿ ಉಳಿಕೆ ಯಾವುದೇ ವಸ್ತುಗಳಿಂದ ತಯಾರಿಸಲಾದ ರಾಷ್ಟ್ರಧ್ವಜಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಹಾಗೂ ಇನ್ನಿತರೆ ಯಾವುದೇ ವಸ್ತುಗಳಿಂದ ತಯಾರಿಸಲಾದ ಬಾವುಟಗಳನ್ನು ಮಾರಾಟ ಮಾಡುವುದನ್ನು ಹಾಗೂ ಉಪಯೋಗಿಸುವುದನ್ನು ನಿಷೇಧಿಸಿದ್ದು, ಇದನ್ನು ಉಲ್ಲಂಘಿಸಿ ಬಾವುಟಗಳನ್ನು ಮಾರಾಟ ಮಾಡುವವರ ಹಾಗೂ ಧ್ವಜ ಹಾರಿಸುವವರ ವಿರುದ್ಧ ಧ್ವಜ ಸಂಹಿತೆಯಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಎಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ.
ಅವಧಿ ವಿಸ್ತರಣೆ
ಹಾಸನ: ಹಿಂದುಳಿದ ವರ್ಗಗಳ ಹಾಗೂ ಮತೀಯ ಅಲ್ಪಸಂಖ್ಯಾತರ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ 4 ವರ್ಷಗಳ ತರಬೇತಿಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವೆಂದು ನಿಗದಿಪಡಿಸಲಾಗಿತ್ತು. ಅರ್ಜಿಗಳು ಬಾರದೆ ಇರುವ ಕಾರಣ ಅರ್ಜಿ ಸಲ್ಲಿಕೆಗೆ ಆಗಸ್ಟ್ 16ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಮೇಲ್ಕಂಡ ಕಚೇರಿ ಸಂಪರ್ಕಿಸಿ ಪಡೆಯಬಹುದಾಗಿದೆ.