ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಲೋಕಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ಮ್ಯಾಚ್ಫಿಕ್ಸಿಂಗ್

Rashmi Kasaragodu
Updated On : 10 Aug 2013, 11:29 am

ಕ.ಪ್ರ.ವಾರ್ತೆ    ಹಾಸನ    ಆ. 10
ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ನಂತೆ ಲೋಕಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವ ರಾಜಕೀಯ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಸಿಪಿಎಂ ಪಾಲಿಟ್ಬ್ಯೂರೋ ಸದಸ್ಯ ಮತ್ತು ರಾಜ್ಯಸಭೆ ಸದಸ್ಯ ಸೀತಾರಾಂ ಯೆಚೂರಿ ಆರೋಪಿಸಿದರು. ನಗರದಲ್ಲಿ ಶನಿವಾರ ನಡೆದ ದೇಶದ ಅಭಿವೃದ್ಧಿಗಿರುವ ಪರ್ಯಾಯ ಮಾರ್ಗಗಳು ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಲೋಕಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಹುತೇಕ ಕೆಟ್ಟ ಆರ್ಥಿಕ ನೀತಿಗಳಲ್ಲದೇ ಹಲವು ನಿರ್ಧಾರಗಳಿಗೆ ಪೂರಕವಾಗಿ ಸ್ಪಂದಿಸುತ್ತಿದೆ. ದೇಶದ ಆರ್ಥಿಕ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವ ವಿದೇಶಿ ನೇರ ಬಂಡವಾಳ ಹೂಡಿಕೆ ಕಾಯ್ದೆ ಸೇರಿದಂತೆ ಅನೇಕ ವಿಷಯಗಳಲ್ಲಿ ಬಿಜೆಪಿ ಬೆಂಬಲಿಸುತ್ತಿದೆ. ಇದು ಎರಡು ಪಕ್ಷಗಳ ನಡುವೆ ಆಗಿರುವ ರಾಜಕೀಯ ಫಿಕ್ಸಿಂಗ್ ಅಲ್ಲದೇ ಮತ್ತೇನು ಅಲ್ಲ ಎಂದು ಟೀಕಿಸಿದರು.
ರಾಜಕೀಯ ಸ್ಟಂಟ್, ಚುನಾವಣೆ ಲಾಭ ಗಳಿಸುವ ಹುನ್ನಾರ:  ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅಂದಿನ ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಅವರು, ನೂರು ದಿನಗಳಲ್ಲಿ ಕೇಂದ್ರ ಆಹಾರ ಭದ್ರತೆ ಕಾಯ್ದೆ ಸೇರಿದಂತೆ 10 ಅತ್ಯುತ್ತಮ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಹೇಳಿದ್ದರು.
ಆದರೆ 18 ನೂರು ದಿನಗಳಾದರೂ ಜಾರಿಗೊಳಿಸಲಿಲ್ಲ. ಆದರೆ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿರುವುದು ರಾಜಕೀಯ ಸ್ಟಂಟ್ ಅಲ್ಲದೇ ಚುನಾವಣೆಯಲ್ಲಿ ಲಾಭ ಗಳಿಸುವ ಹುನ್ನಾರವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ದೇಶದ ಶೇ. 67 ರಷ್ಟು ಕುಟುಂಬಗಳಿಗೆ ಆಹಾರ ಕಾಯ್ದೆಯಡಿ ಅಕ್ಕಿ, ಗೋಧಿ ಮತ್ತು ಆಹಾರ ಧ್ಯಾನಗಳನ್ನು ಆಹಾರ ಭದ್ರತೆ ಕಾಯ್ದೆಯಡಿ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ ಎಡಪಕ್ಷಗಳು ಶೇ. 90 ರಷ್ಟು ಕುಟುಂಬಗಳಿಗೆ ನೀಡಿ ಎಂದು ಆಗ್ರಹಿಸಿದರೇ, ನಮ್ಮಲ್ಲಿ ಹಣ ಇಲ್ಲ ಎಂದು ಕೇಂದ್ರ ಸರ್ಕಾರ ಉತ್ತರಿಸುತ್ತದೆ.
ಕಾಂಗ್ರೆಸ್, ಬಿಜೆಪಿ ಚಕಾರ ಎತ್ತುವುದಿಲ್ಲ:  2 ಸ್ಟೆಕ್ಟ್ರಂ ಹಗರಣದ 1.76 ಲಕ್ಷ ಕೋಟಿ ರು. ಗಳನ್ನು  ವಸೂಲಿ ಮಾಡಿ ಆಹಾರ ನೀಡಬಹುದು. ಕಲ್ಲಿದ್ದಲು ಹಗರಣದಲ್ಲಿ ನಡೆದಿರುವ ಅಪಾರ ಪ್ರಮಾಣದ ಹಣವನ್ನು ಶಿಕ್ಷಣ ಹಕ್ಕು ಕಾಯ್ದೆಯಡಿ ಎಲ್ಲರಿಗೂ ಉಚಿತ ಶಿಕ್ಷಣ ನೀಡುವ ಮತ್ತು ಮಧ್ಯಾಹ್ನದ ಬಿಸಿಯೂಟ ನೀಡಲು ಬಳಸಿಕೊಳ್ಳಬಹುದು. ಈ ಬಗ್ಗೆ ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ಚಕಾರ ಎತ್ತುವುದಿಲ್ಲ.
ಏಕೆಂದರೆ ಈ ಎರಡೂ ಪಕ್ಷಗಳ ಮುಖಂಡರು ಒಂದಲ್ಲ ಒಂದು ರೀತಿಯಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಇದು ಕೂಡಾ ಲೋಕಸಭೆಯಲ್ಲಿ ರಾಜಕೀಯ ಮ್ಯಾಚ್ಫಿಕ್ಸಿಂಗ್ ನಡೆಯಲು ಕಾರಣವಾಗಿದೆ. ಇಂತಹ ಪಕ್ಷಗಳಿಂದ ಭ್ರಷ್ಟಾಚಾರ ತಡೆಯಲು ಖಂಡಿತ ಸಾಧ್ಯವಿಲ್ಲ ಎಂದು ಅವರು ವಿಶ್ಲೇಷಿಸಿದರು.
ಹತ್ತಕ್ಕೂ ಹೆಚ್ಚು ಪಕ್ಷಗಳೊಂದಿಗೆ ಸರ್ಕಾರ ರಚಿಸಿದ್ದ ಯುಪಿಎ ಜೊತೆ ಈಗ ಶರದ್ಪವಾರ್ ನೇತೃತ್ವದ  ರಾಷ್ಟ್ರೀಯ ಕಾಂಗ್ರೆಸ್ ಕಾಶ್ಮೀರದ ಫಾರುಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಮಾತ್ರ ಇವೆ. ಹಾಗೆಯೇ ಬಿಜೆಪಿ ನೇತೃತ್ವದ ಎನ್ಡಿಎನಲ್ಲಿ ಶಿವಸೇನೆ ಮತ್ತು ಅಕಾಲಿದಳ ಮಾತ್ರ ಇವೆ. ಇದು ಕಾಂಗ್ರೆಸ್, ಬಿಜೆಪಿ ವರ್ಚಸ್ಸನ್ನು ಕಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಪರ್ಯಾಯ ನೀತಿ ಆಧಾರಿತ ಸರ್ಕಾರ ರಚನೆ:  ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಸರ್ಕಾರ ರಚನೆಯಾಗುವುದು ಖಚಿತ. ಲೋಕಸಭೆ ಚುನಾವಣೆ ನಂತರವೇ ರಾಷ್ಟ್ರೀಯ ರಂಗ ರಚನೆಯಾಗಿ ವಿ.ಪಿ. ಸಿಂಗ್ ಪ್ರಧಾನಿಯಾದರು.  1996 ರಲ್ಲಿಯೂ ಚುನಾವಣೆ ನಂತರವೇ ಸಂಯುಕ್ತ ರಂಗ ರಚನೆಯಾಗಿ ದೇವೇಗೌಡರು ಪ್ರಧಾನಿಯಾದರು.  ಹಾಗಾಗಿ ಚುನಾವಣೆ ನಂತರವೇ ಯುಪಿಎ ಸರ್ಕಾರ ರಚನೆಯಾಗಿ ಮನಮೋಹನನ್ಸಿಂಗ್ಪ್ರ್ಧಾನಿಯಾದರು. ಹಾಗಾಗಿ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್, ಬಿಜೆಪಿಯೇತರ ಪಕ್ಷಗಳಡಿ ತೃತೀಯ ರಂಗ ರಚನೆಯಾಗುವುದಿಲ್ಲ. ಚುನಾವಣೆ ನಂತರ ಪರ್ಯಾಯ ನೀತಿಗಳ ಆಧಾರದ ಮೇಲೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾದ ಕೇಂದ್ರ ಸರ್ಕಾರ ರಚನೆಯಾಗುತ್ತದೆ. ಅದು ಖಚಿತ ಎಂಬ ಅದಮ್ಯ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಯಾರನ್ನು ನಂಬುವುದು:   ಸಿಪಿಎಂ ನೆರವಿನಿಂದ ಪ್ರಧಾನಿಯಾದ ಎಚ್.ಡಿ.ದೇವೇಗೌಡರ ನೇತೃತ್ವದ ಜೆಡಿಎಸ್ ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹಾಗೆಯೇ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರು, ಲೋಕಸಭೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಕಾಯ್ದೆಯನ್ನು ಬೆಂಬಲಿಸಿದರು. ಹಾಗಾಗಿ ಯಾರನ್ನು ನಂಬುವುದು  ಎಂಬ ಗೊಂದಲ ಉಂಟಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಾಯಕತ್ವ ಬದಲಾವಣೆಯಿಂದ ಸಾಧ್ಯವಿಲ್ಲ:  ಈಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ರಾಗ ಆರಂಭವಾಗಿದೆ. ಅದೆನೆಂದರೇ ನರೇಂದ್ರ ಮೋದಿ ರಾಗ. ಹಿಂದೆ ಆಡ್ವಾಣಿಗಿಂತ ವಾಜಪೇಯಿ ಉತ್ತಮ ಎಂದು ಬಿಂಬಿಸಿದ ಬಿಜೆಪಿ ಈಗ ಆಡ್ವಾಣಿಗಿಂತ ಮೋದಿ ಉತ್ತಮ ಎಂದು ಬಿಂಬಿಸುತ್ತಿದೆ. ಆಡ್ವಾಣಿ ಅವರ ರಥಯಾತ್ರೆ ಫಲವಾಗಿ ಉಂಟಾದ ಕೋಮು ಗಲಭೆ ಹಿನ್ನೆಲೆಯಲ್ಲಿ ಮೋದಿ ಗುಜರಾತ್ ಸಿಎಂ ಆದರು. ಅಂಥವರು ಬಿಜೆಪಿ ಪ್ರಧಾನಿ ಮಾಡಲಿಕ್ಕೆ ಹೊರಡಿರುವುದು ದುರಂತ ಎಂದು ಖಂಡಿಸಿದರು.
ಚಿನ್ನ ಮತ್ತು ಶ್ರೀಮಂತರು ಬಳಸುವ ಐಷಾರಾಮಿ ಕಾರು ಮತ್ತಿತರ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ದೇಶದ ಆರ್ಥಿಕತೆಯಲ್ಲಿ ಅಸ್ತಿರತೆ ಉಂಟಾಗಲು ಕಾರಣ. ಕಾರ್ಪೋರೇಟ್ ಸಂಸ್ಥೆಗಳಿಗೆ 5.76 ಲಕ್ಷ ಕೋಟಿ ರು. ತೆರಿಗೆ ಮನ್ನಾ ಮಾಡಲಾಗಿದೆ. ಆದರೆ ದೇಶದ ಕೈಗಾರಿಕೆ ಕ್ಷೇತ್ರದಲ್ಲಿ ಬೆಳವಣಿಗೆ ಆಗಿರುವುದು ಶೇ. 7 ರಷ್ಟು ಮಾತ್ರ. ಬದಲಿಗೆ ವಿದ್ಯುತ್, ನೀರಾವರಿ, ರಸ್ತೆ ನಿರ್ಮಾಣ ಮತ್ತಿತರ ಸಾರ್ವಜನಿಕ ಕ್ಷೇತ್ರಗಳ ಮೇಲೆ ಬಂಡವಾಳ ಹೂಡಿದರೆ ದೇಶದ ಜನರ ಜೀವನ ಮಟ್ಟ ಸುಧಾರಣೆ ಆಗುತ್ತದೆ ಹೊರತು ವಿದೇಶಿ ಬಂಡವಾಳ ಹೂಡಿಕೆಯಿಂದ ಅಲ್ಲ ಎಂದರು. ಕೇಂದ್ರದ ಕೆಟ್ಟ ನೀತಿಗಳಿಂದ ರಿಯಲ್ ಎಸ್ಟೇಟ್ ಹಾಗೂ ಚಿನ್ನದ ಮೇಲೆ ಹೆಚ್ಚು ಬಂಡವಾಳ ಹೂಡುತ್ತಿರುವುದನ್ನು ತಪ್ಪಿಸದಿದ್ದರೇ ಜನರ ಖರೀದಿ ಸಾಮಾರ್ಥ್ಯ ಹೆಚ್ಚಾಗುವುದಿಲ್ಲ ಎಂದು ಹೇಳಿದರು.
ಸಿಪಿಎಂ ಮುಖಂಡ ಜಿ.ವಿ. ಶ್ರೀರಾಮರೆಡ್ಡಿ, ಜಿ.ಎನ್. ನಾಗರಾಜ್, ಮಾರುತಿ ಮಾನ್ವಡೆ, ವಿ. ಸುಕುಮಾರ್, ಪ್ರಸನ್ನಕುಮಾರ್, ಸತ್ಯನಾರಾಯಣ, ಹರೀಶ್, ನವೀನ್ಕುಮಾರ್, ಕೆ. ಶಂಕರ್, ಧರ್ಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement