ಸಾರಿಗೆ ಬಸ್ ಜಾಯಿಂಟ್ ಆಕ್ಸಲ್ ತುಂಡು: ಸ್ವಲ್ಪದರಲ್ಲೇ ತಪ್ಪಿದ ಭಾರಿ ಅನಾಹುತ
ಕ.ಪ್ರ.ವಾರ್ತೆ ಬೇಲೂರು ಆ.10
ಇಲ್ಲಿನ ವಿಷ್ಣುಸಮುದ್ರ ಕೆರೆ ಏರಿಯಿಂದ ಬಸ್ ಬಿದ್ದು 8 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡ ಘಟನೆ ಇನ್ನೂ ಜನ ಮಾನಸದಿಂದ ಮರೆಯಾಗುವ ಮುಂಚೆಯೇ ಮತ್ತೆ ರಸ್ತೆ ಸಾರಿಗೆ ಸಂಸ್ಥೆ ಬಸ್ನ ಜಾಯಿಂಟ್ ಆಕ್ಸಲ್ ತುಂಡಾಗಿ ಭಾರಿ ಅಪಾಯದಿಂದ ಪ್ರಯಾಣಿಕರು ಪಾರಾದ ಘಟನೆ ಶನಿವಾರ ತಾಲೂಕಿನ ಅರೇಹಳ್ಳಿ ಸಮೀಪ ನಡೆದಿದೆ.
ವಿಷ್ಣುಸಮುದ್ರ ಕೆರೆ ಘಟನೆಯಿಂದ ರಾಜ್ಯ ಸಾರಿಗೆ ಸಂಸ್ಥೆಯವರು ಎಚ್ಚೆತ್ತು ಕೊಳ್ಳುತ್ತಾರೆ ಎಂಬ ನಿರೀಕ್ಷೆ ಸುಳ್ಳಾಗಿದ್ದು, ಮತ್ತೆ ಡಿಪೋ ವ್ಯವಸ್ಥಾಪಕರು ತಮ್ಮ ಹಳೇ ಚಾಳಿಯನ್ನು ಮುಂದುವರೆಸಿದ್ದಾರೆ ಎಂಬುದಕ್ಕೆ ಈ ಘಟನೆ ಹಾಗೂ ಚಾಲಕನ ಹೇಳಿಕೆ ಸಾಕ್ಷಿ ಎಂಬಂತಿದೆ.
ಭೇಟಿ ನೀಡಿದ್ದ ವರದಿಗಾರರಿಗೆ ಮಾಹಿತಿ ನೀಡಿದ ಬಸ್ ಚಾಲಕ, ಮೂಡಿಗೆರೆ
ಯಿಂದ ಅರೇ ಹಳ್ಳಿ ಮಾರ್ಗ ಹಾಸನಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಸಿಂಗಾ ಪುರ ಗ್ರಾಮ ದ ಬಳಿ ಬಂದಾಗ ಆಕ್ಸಲ್ ತುಂಡಾಯಿತು. ತಕ್ಷಣ ಬ್ರೇಕ್ ಒತ್ತಿ ವೇಗ ಕಡಿಮೆ ಮಾಡಿ ಬಾಗಿಲ ಬಳಿಯಿದ್ದ ಪ್ರಯಾಣಿಕರಿಬ್ಬರಿಗೆ ಇಳಿದು ಚಕ್ರಕ್ಕೆ ಕಲ್ಲು ಕೊಡುವಂತೆ ಸೂಚಿಸಿದೆ. ಪ್ರಯಾಣಿಕರಿಬ್ಬರು ತಕ್ಷಣವೆ ಇಳಿದು ಚಕ್ರಕ್ಕೆ ಕಲ್ಲು ಕೊಟ್ಟರು. ಬಸ್ ನಿಂತಿತು. ಇನ್ನು 10 ಅಡಿ ಮು ಂದಕ್ಕೆ ಬಸ್ ಚಲಿಸಿದ್ದರೆ ಎರಡೂ ಬದಿ 20 ಅಡಿ ಆಳದ ಕಂದಕಗಳಿದ್ದು ಇದಕ್ಕೆ ಬೀ ಳುವ ಅಪಾಯವಿತ್ತು ಎಂದು ತಿಳಿಸಿದರು.
ಶುಕ್ರವಾರ ಡಿಪೋದಲ್ಲಿ ಬಸ್ ನೀಡುವಾಗ ಆಕ್ಸಲ್ ಪ್ರಾಬ್ಲಂ ಇರುವುದನ್ನ ತಿಳಿಸಿದೆ. ಅದನ್ನ ಪರಿಶೀಲಿಸಿ ಪಿನ್ ಒಂದನ್ನ ಅಳವಡಿಸಿ ಏನೂ ಆಗುವುದಿಲ್ಲ ಎಂದು ಹೇಳಿ ಕಳುಹಿಸಿದರು. ಈ ತರಹ ಆದರೆ ಏನು ಮಾಡುವುದು ಎಂದು ಪ್ರಶ್ನಿಸಿದರು.
ಇದು ಸಾಲದು ಎಂಬಂತೆ ಈ ಬಸ್ ಘಟನೆ ನಡೆದ ಕೇವಲ 1 ಕಿ.ಮಿ ದೂರದಲ್ಲಿ ಲಿಂಗಾಪುರ ಎಂಬ ಗ್ರಾಮದ ಸಮೀಪ ಮತ್ತೊಂದು ಸಾರಿಗೆ ಬಸ್ ಬ್ರೇಕ್ಫೇಲ್ ಆಗಿ ರಸ್ತೆ ಬದಿಗೆ ನಿಂತಿತ್ತು. ಅದರಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ಗೆ ಹತ್ತಿಸಿ ನಂತರ ಅದನ್ನ ಡಿಪೋಗೆ ವಾಪಸ್ ಕಳುಹಿಸಲಾಯಿತು ಎಂದು ಗ್ರಾಮಸ್ಥರು ತಿಳಿಸಿದರು.