ಸ್ವಾತಂತ್ರ್ಯ ಪೂರ್ವದಿಂದಲೂ ಡಾಂಬರ್ ಕಂಡಿಲ್ಲ!
ಎ.ರಾಘವೇಂದ್ರ ಹೊಳ್ಳ
ಬೇಲೂರು: ಸ್ವಾತಂತ್ರ್ಯ ಪೂರ್ವದಿಂದಲೂ ಡಾಂಬರನ್ನು ಕಾಣದ ಹಾಗೂ ಬಹುತೇಕ ಮನೆಗಳಲ್ಲಿ ಶೌಚಾಲಯವಿಲ್ಲದೆ ಪಾಳುಬಿದ್ದ ಗ್ರಾಮದಂತೆ ಕಾಣುವ ಕಲ್ಲುಶೆಟ್ಟಿಹಳ್ಳಿ ಗ್ರಾಮದ ಜನತೆಯ ಬದುಕು ಅತ್ಯಂತ ಶೋಚನೀಯವಾಗಿದೆ.
ಗ್ರಾಮೀಣ ಪ್ರದೇಶ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಂಚವಾರ್ಷಿಕ ಯೋಜನೆ, ಸುವರ್ಣ ಗ್ರಾಮ, ಗ್ರಾಮ ಸಡಕ್ ನಂತಹ ಹಲವಾರು ಯೋಜನೆಗಳನ್ನು ರೂಪಿಸುತ್ತ ಬಂದಿವೆ. ಆದರೆ ಇಂದಿನ ಆಧುನಿಕ ಯುಗದಲ್ಲೂ ಡಾಂಬರು ಕಾಣದ ರಸ್ತೆ, ಶೌಚಾಲಯವಿಲ್ಲದ ಮನೆಗಳು ಕುಡಿಯಲು ಶುದ್ಧವಾದ ನೀರು ಹಾಗೂ ಶುಚಿತ್ವದ ಕೊರತೆಯಿಂದ ಈ ಗ್ರಾಮಸ್ಥರು ಬಳಲುತ್ತಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಜಾರಿಯಾಗುವ ಯೋಜನಗೆಳು ಗ್ರಾಮೀಣ ಪ್ರದೇಶಕ್ಕೆ ಬರುವ ವೇಳೆಗೆ ಅಲ್ಲಲ್ಲಿ ಸೋರಿಕೆಯಾಗಿ ಕೊನೆಯಲ್ಲಿ ಪಾಲಿಗೆ ಬಂದಿದ್ದು ಪಂಚಾಮೃತ ಎಂಬಂತಾಗಿರುತ್ತದೆ. ಅದೆಷ್ಟೋ ಯೋಜನೆಗಳು ಇಲಾಖೆಯ ಬಿಳಿ ಹಾಳೆಯ ಮೇಲೆ ಮಾತ್ರ ಅಭಿವೃದ್ಧಿಯಾಗಿ ಅನುದಾನದ ಹಣ ಮಾತ್ರ ಬಿಡುಗಡೆಯಾಗಿ ಜನಪ್ರತಿನಿಧಿ ಹಾಗೂ ಗುತ್ತಿಗೆದಾರರ ಜೇಬು ಸೇರಿರುವು ಉದಾಹರಣೆ ಸಾಕಷ್ಟಿದೆ.
ಗ್ರಾಮಸ್ಥರ ಖಡಕ್ ಪ್ರಶ್ನೆ: ತಾಲೂಕಿನಲ್ಲಿ ಈಗಲೂ ಬಹುತೇಕ ಗ್ರಾಮ ಕುಗ್ರಾಮಗಳಾಗಿದ್ದು ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿಗೆ ಸಾಕ್ಷಿಯಾಗಿವೆ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರವೂ ಅದಷ್ಟೋ ಗ್ರಾಮಗಳ ರಸ್ತೆಗಳೂ ಡಾಂಬರನ್ನು ಕಂಡಿಲ್ಲ ಎಂದಾದರೆ ಯಾವ ಪುರುಷಾರ್ಥಕ್ಕೆ ಸರ್ಕಾರದ ಯೋಜನೆ ತರಬೇಕು ಎಂಬುದು ಗ್ರಾಮಸ್ಥರ ಖಡಕ್ ಪ್ರಶ್ನೆ.
ತಾಲೂಕಿನ ಮಾದೀಹಳ್ಳಿ ಹೋಬಳಿ ಆಂದಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕಲ್ಲುಶೆಟ್ಟಿಹಳ್ಳಿ ಗ್ರಾಮದ ಜನತೆಯ ಬದುಕು ನಿಜಕ್ಕೂ ಚಿಂತಾಜನಕವಾಗಿದೆ. ತಾಲೂಕಿನಲ್ಲಿ ಈ ಮಾದರಿಯ ಗ್ರಾಮ ಇದೆಯೇ ಎಂಬುದು ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಕಲ್ಲುಶೆಟ್ಟಿಹಳ್ಳಿ ಗ್ರಾಮದಲ್ಲಿ 80 ಮನೆಗಳಿದ್ದು 500 ಕ್ಕೂ ಹೆಚ್ಚು ಮಂದಿ ಜೀವನ ಸಾಗಿಸುತ್ತಿದ್ದಾರೆ. ಗೌಡರು, ಲಿಂಗಾಯಿತಿ, ದಲಿತರು ಇದ್ದಾರೆ.
ಈ ಗ್ರಾಮದೊಳಗೆ ಪ್ರವೇಶಿಸಿದರೆ ಓಡಾಡಲು ರಸ್ತೆಯೇ ಇಲ್ಲದಿರುವುದು ವಿಶೇಷ ಎನ್ನಬಹುದು. ಗ್ರಾಮದ ಯುವಕ ಧರಣೇಗೌಡ, ಗಿರೀಶ್, ಪರಮೇಶ್, ನಂಜೇಶ್ ಮಾತನಾಡಿ, ತಾವು ಹುಟ್ಟಿದಾಗಿನಿಂದ ಗ್ರಾಮದಲ್ಲಿ ಡಾಂಬರು ರಸ್ತೆಯನ್ನು ಕಂಡಿಲ್ಲ. ಕಳೆದ 5 ವರ್ಷದಿಂದ ಸುವರ್ಣ ಗ್ರಾಮ ಯೋಜನೆಯಡಿ ಚರಂಡಿ ಕಾಮಗಾರಿ ಮಾಡಿದ್ದರು. ಆದರೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಚರಂಡಿಯಲ್ಲಿ ನೀರು ನಿಂತಿದೆ.
ಈ ಬಗ್ಗೆ ಆಂದಲೆ ಪಿಡಿಓ ಗಮನಕ್ಕೆ ತಂದರೆ ಕಾಮಗಾರಿ ನಡೆಯುತ್ತಿರುವುದೇ ನಿಮ್ಮ ಪುಣ್ಯ. ಅದು ಬಿಟ್ಟು ದೂರು ನೀಡಿದರೆ ಇರೋ ಕೆಲಸಕ್ಕೂ ಕಲ್ಲು ಬೀಳುತ್ತೆ ಹೋಗಿ ಎಂದು ಉಡಾಫೆ ಉತ್ತರ ನೀಡಿ ಸಾಗಹಾಕಿದರು. ಆದರೆ ಆಗ ನಡೆದ ಕಳಪೆ ಕಾಮಗಾರಿಯಿಂದಾಗಿ ಕೊಚ್ಚೆ ನೀರು ವರ್ಷಾನುಗಟ್ಟಲೆ ನಿಲ್ಲವಂತಾಗಿ ರೋಗರುಜಿನಗಳ ತಾಣವಾಗಿ ಮಾರ್ಪಟ್ಟಿದೆ. ಡಾಂಬರು ಇಲ್ಲದೆ ರಸ್ತೆ ಮೇಲೆ ಕೊಳಕು ನೀರು ಹರಿದು ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ.
ಶೇ. 90 ರಷ್ಟು ಮನೆಯಲ್ಲಿ: ಗ್ರಾಮದಲ್ಲಿ ಸಮರ್ಪಕವಾದ ರಸ್ತೆ ಇಲ್ಲದೆ ಜನತೆ ಪರದಾಡುವಂತಾಗಿದ್ದು ನ್ಯಾಯಬೆಲೆ ಅಂಗಡಿ ಪಕ್ಕದ ಲಕ್ಷ್ಮಿಪುರ ಗ್ರಾಮದಲ್ಲಿದ್ದು ಅಲ್ಲಿಗೆ ಹೋಗಬೇಕಾದರೆ ಗದ್ದೆ ಹಳ್ಳದ ಮುಖಾಂತರ ಹೋಗಬೇಕಾಗಿದೆ. ಗದ್ದೆಯಲ್ಲಿ ಕೆಸರು ತುಂಬಿದ್ದು ವಯಸ್ಸಾದ ಕೆಲವರು ಬಿದ್ದು ಗಾಯಗೊಂಡಿದ್ದಾರೆ. ಈ ಗ್ರಾಮದ ಎಲ್ಲರ ಕನಸೆಂದರೆ ಈಗಲಾದರೂ ರಸ್ತೆಗೆ ಡಾಂಬರು ಹಾಕಿಸಿದರೆ ಅವರ ಪೋಟೋ ಇಟ್ಟು ದಿನನಿತ್ಯ ಪೂಜೆ ಮಾಡುತ್ತೇವೆ. ಆದರೆ ನಮ್ಮ ಗೋಳು ಕೇಳುವವರು ಯಾರು, ಅಲ್ಲದೆ ಇಲ್ಲಿರುವ ಶೇ. 90 ರಷ್ಟು ಮನೆಯಲ್ಲಿ ಶೌಚಾಲಯವಿಲ್ಲವಾಗಿದೆ. ಈಗಲೂ ನಮಗೆ ಬಯಲು ಶೌಚಾಲಯವೇ ಗತಿಯಾಗಿದ್ದು ಹೆಂಗಸರು ಅತಿ ಮುಜುಗರದಿಂದಲೇ ಶೌಚಕ್ಕೆ ತೆರಳಬೇಕಾಗಿದೆ. ಶೌಚಾಲಯ ನಿರ್ಮಿಸಲು ಸರ್ಕಾರದ ಅನುದಾನವಿದ್ದರೂ ಅದನ್ನು ಯಾವ ರೀತಿ ಬಳಸಬೇಕು ಎಂದು ಮಾರ್ಗದರ್ಶನ ನೀಡಲು ಗ್ರಾಪಂ ಸದಸ್ಯರು ಒಲವು ತೋರುತ್ತಿಲ್ಲ. ಜನಪ್ರತಿನಿಧಿಗಳಿಗೆ ಕಲ್ಲುಶೆಟ್ಟಿ ಗ್ರಾಮ ಎಲ್ಲಿದೆ ಅಂತ ಗೊತ್ತಿಲ್ಲ ಎಂಬುದು ಜನತೆಯ ಅಳಲಾಗಿದೆ.
ಗ್ರಾಮಕ್ಕೆ ತುರ್ತಾಗಿ ಸರ್ಕಾರಿ ಸಾರಿಗೆ ವ್ಯವಸ್ಥೆ ಆಗಬೇಕಿದೆ. ಬಸ್ ಹತ್ತಬೇಕು ಎಂದರೆ 4 ಕಿ.ಮೀ. ನಡೆದು ಗಡಿ ತಲುಪಬೇಕು. ಆದರೆ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ವೃದ್ಧರು ಇರುವುದರಿಂದ ಬಳಲುತ್ತಲೇ ಗಡಿಯನ್ನು ತಲುಪಿ ನಂತರ ಮತ್ತೆ ಕೆಲಸ ಮುಗಿಸಿ ಗಡಿಯಲ್ಲಿ ಇಳಿದು ಮನೆ ತಲುಪಬೇಕು. ರೋಗಿಗಳು ಹಾಗೂ ಬಾಣಂತಿಯರು, ಗರ್ಭಿಣಿಯರು ಮಕ್ಕಳು ಓಡಾಡಲು ತೊಂದರೆಯಾಗುತ್ತಿದ್ದು ಸಾರಿಗೆ ಸಂಸ್ಥೆಯವರು ಕೃಪೆ ತೋರಿ ಈ ಗ್ರಾಮಕ್ಕೆ ಬಸ್ ಸೌಲಭ್ಯ ಇನ್ನಾದರೂ ಕಲ್ಪಿಸಬೇಕಾಗಿದೆ.