ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಲವು ಪ್ರಕರಣಗಳ ಅಂತಾರಾಜ್ಯ ಕಳ್ಳನ ಸೆರೆ: ರು. 9.50 ಲಕ್ಷ ಮೌಲ್ಯದ ಚಿನ್ನಾಭರಣ ವಶ

Rashmi Kasaragodu
Updated On : 10 Aug 2013, 11:32 am

ಕ.ಪ್ರ. ವಾರ್ತೆ೤ ಅರಸೀಕೆರೆ೤ ಆ. 10
ಪಟ್ಟಣದ ಹಲವು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಕಳ್ಳನನ್ನು ಬಂಧಿಸಿ, ಆತನಿಂದ 9.50 ಲಕ್ಷ ರು. ಹಾಗೂ 32 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ವಿಜಯವಾಡ ಗಾಂಧಿಪಾರ್ಕ್ ನಿವಾಸಿ ಪ್ಲಾಸ್ಟಿಕ್ ಹಾಗೂ ಬಳೆ ವ್ಯಾಪಾರ ಮಾಡುವ ನರಸಿಂಹ ಎಂಬುವರ ಪುತ್ರನಾದ ಮಣಿಕಂಠ ಈತನ ವಾಸ ವಿಚಾರಣೆ ವೇಳೆ ಕೇರಳ ರಾಜ್ಯದ ಕಣ್ಣೂರು ತಾಲೂಕಿನ ಕಾಸರಗೋಡಿನ ಹೊಳೆಬೀದಿಯಲ್ಲಿ.
 ಈತ ಜೂನ್ 14 ರಂದು ಬೆಳಗ್ಗೆ 9.30 ರಲ್ಲಿ ಪಟ್ಟಣದ ಮಾರುತಿ ನಗರದಲ್ಲಿ ಮನೆಯ ಹಿಂಬಾಗಿಲು ಮುರಿದು ಹಾಡುಹಗಲೇ ದರೋಡೆ ನಡೆಸಿ 5.34 ಲಕ್ಷ ರು. ನಗದು ಹಾಗೂ 32 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.
ಈ ಸಂಬಂಧ ನೀಡಿದ್ದ ದೂರಿನ ಮೇರೆಗೆ ವಿಚಾರಣೆ ಕೈಗೊಂಡ ಪೊಲೀಸರು ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ ಆದೇಶದ ಮೇರೆಗೆ ಡಿವೈಎಸ್ಪಿ  ಐ.ಜಿ.ಮಂಜುನಾಥ್ ಮಾರ್ಗದರ್ಶನದಲ್ಲಿ ನಗರಠಾಣೆಯ ವೃತ್ತ ನಿರೀಕ್ಷಕ ಕುಮಾರಸ್ವಾಮಿ ನೇತೃತ್ವದಲ್ಲಿ ಸಿಬ್ಬಂದಿ ಒಳಗೊಂಡ ತಂಡ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಯಿತು.
 ಮಣಿಕಂಠ ರಾಜ್ಯ ಮತ್ತು ಜಿಲ್ಲೆಯ ನಾನಾ ನಡೆದಿರುವ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬುದು ಗೊತ್ತಾಗಿದೆ. ಅಲ್ಲದೇ ತಮಿಳುನಾಡು, ಆಂಧ್ರ ಇತ್ಯಾದಿ ಕಡೆಗಳಲ್ಲಿಯೂ ತನ್ನ ಕೈಚಳಕ ಪ್ರದರ್ಶಿಸಿ ಕಳ್ಳತನ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪತ್ತೆ ಪ್ರಕರಣದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಹಿರಾಸಿಂಗ್, ಶಿವಕುಮಾರ್ನಾಯ್ಕ್, ಜಗನ್ನಾಥ್ ಇನ್ನಿತರರು ಶ್ರಮಿಸಿದ್ದು, ಎಸ್ಪಿ ಅವರನ್ನು ಅಭಿನಂದಿಸಿದ್ದಾರೆ.
ಅಪಘಾತ: ಬೈಕ್ ಸವಾರ ಸಾವು
ಅರಸೀಕೆರೆ:  ಕಾರು ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
 ತಾಲೂಕಿನ ಬೆಂಡೆಕೆರೆ ಗೊಲ್ಲರಹಟ್ಟಿ ಗ್ರಾಮದ ವಾಸಿ ವೆಂಕಟೇಶ್ (42) ಸಾವನ್ನಪ್ಪಿದ ದುರ್ದೈವಿ.
 ಬೆಂಡೆಕೆರೆ ಗ್ರಾಮದಲ್ಲಿ ಸ್ನೇಹಿತರಾದ ವೆಂಕಟೇಶ ಮತ್ತು ಶಿವಣ್ಣ ಬೈಕ್ನಲ್ಲಿ ಹೋಗುತ್ತಿದ್ದಾಗ ಅರಸೀಕೆರೆ ಕಡೆಯಿಂದ ಬಂದ ಕಾರು ಚಾಲಕನ ನಿರ್ಲಕ್ಷ್ಯತೆಯಿಂದ ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ವೆಂಕಟೇಶ ತಲೆಗೆ ತೀವ್ರ ಗಾಯವಾಗಿದ್ದು,  ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ಪ್ರತ್ಯಕ್ಷದರ್ಶಿ ಅಜ್ಜಪ್ಪ ಬಾಣಾವರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಅಂದರ್ ಬಾಹರ್:ನಾಲ್ವರ ಬಂಧನ
ಚನ್ನರಾಯಪಟ್ಟಣ: ಅಕ್ರಮವಾಗಿ ಜೂಜಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಘಟನೆ ಹಿರಿಸಾವೆಯಲ್ಲಿ ಶುಕ್ರವಾರ ನಡೆದಿದೆ. ತಾಲೂಕಿನ ಹಿರಿಸಾವೆ ಗ್ರಾಮದ ಬಾಲಕಿಯರ ಪ್ರೌಢಶಾಲೆಯ ಕಾಂಪೌಂಡ್ ಪಕ್ಕ ಅಕ್ರಮವಾಗಿ ಅಂದರ್ ಬಾಹರ್ ಜೂಜಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ನಾಗನಹಳ್ಳಿ ಗ್ರಾಮದ ಪುಟ್ಟ (27), ಬೂಕಗ್ರಾಮದ ಅಣ್ಣೇಗೌಡ (30), ಹಿರಿಸಾವೆಯ ಮುರುಳಿ (23) ಮತ್ತು ಕುಂಬಾರಬೀದಿಯ ಆನಂದ (22) ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 1650 ರು. ನಗದನ್ನು ವಶಪಡಿಸಿಕೊಂಡಿದ್ದಾರೆ.ಹಿರಿಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ವ್ಯಕ್ತಿ ನಾಪತ್ತೆ
ಹಾಸನ: ನಗರದ ಜಯನಗರದ ವಾಸಿ ಸೌಮ್ಯ ಅವರ ಪತಿ ಯೋಗೇಶ(38) ಮನೆಯಿಂದ ಹಾಸನ ನಗರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.
 ಚಹರೆ 5.4 ಅಡಿ, ಕಪ್ಪು ಬಣ್ಣ, ದುಂಡುಮುಖ, ತೆಳುವಾದ ಮೈಕಟ್ಟು, ಎಡ ತುಟಿಯ ಕೆಳ ಭಾಗದಲ್ಲಿ ಮಚ್ಚೆ ಇರುತ್ತೆ.
 ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕ್ರೀಮ್ ಕಲರ್ ಶರ್ಟ್ ಬ್ರೌನ್ ಕಲರ್ ಪ್ಯಾಂಟ್ ಧರಿಸಿದ್ದರು ಎಂದು ಪತ್ನಿ ಸೌಮ್ಯ ಬಡಾವಣೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement