ಹೊಳೆನರಸೀಪುರ ತಾ. ಕುರುಬ ಸಮಾಜ ಅಧ್ಯಕ್ಷರಾಗಿ ಎಸ್.ಪುಟ್ಟಸ್ವಾಮಿ ಆಯ್ಕೆ
ಕ.ಪ್ರ. ವಾರ್ತೆ ಹೊಳೆನರಸೀಪುರ ಆ.10
ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಹಾಗೂ ನಿವೃತ್ತ ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪಟ್ಟಣದ ಕನಕ ಭವನದಲ್ಲಿ ನಡೆದ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಈ ನೂತನ ಅಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಲಾಯಿತು.
ಹಾಲಿ ಅಧ್ಯಕ್ಷರಾಗಿ ಏಳು ವರ್ಷ ಸೇವೆ ಸಲ್ಲಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎನ್.ಮಾಳಿಗೇಗೌಡ ಅವರು ಮಾತನಾಡಿ ತಮಗೆ ವಯಸ್ಸಾಗಿದೆ, ಜತೆಗೆ ಆರೋಗ್ಯದ ಸಲುವಾಗಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಲು ಸಾದ್ಯವಾಗದೆ ಇರುವುದರಿಂದ ಈ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಹಾಜರಿದ್ದ ಕುರುಬ ಸಮಾಜದ ಹಿರಿಯ ಮುಖಂಡ ಸಣ್ಣಜವರೇಗೌಡ ಕಾಂಗ್ರೆಸ್ ಮುಖಂಡ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಸ್.ಪುಟ್ಟಸ್ವಾಮಿ ಅವರನ್ನು ಹೆಸರನ್ನು ಸೂಚಿಸಿದರು. ಅಧ್ಯಕ್ಷ ಮಾಳಿಗೇಗೌಡ ಅವರು ಪುಟ್ಟಸ್ವಾಮಿ ಅವರ ಹೆಸರನ್ನು ಅನುಮೋದಿಸಿದರು.
ಇದೇ ವೇಳೆ ಕಾರ್ಯಕಾರಿ ಸಮಿತಿಗೆ 23 ನಿರ್ದೇಶಕರನ್ನು ಆಯ್ಕೆ ಮಾಡಿದ ನಂತರ ಮಾತನಾಡಿದ ಅಧ್ಯಕ್ಷ ಪುಟ್ಟಸ್ವಾಮಿ ತಾವು ಮುಂದಿನ ದಿನಗಳಲ್ಲಿ ಕನಕ ಭವನದಲ್ಲಿ ಎಲ್ಲ ಜಾತಿ ವರ್ಗದ ಬಡವರಿಗಾಗಿ ವಿದ್ಯಾರ್ಥಿ ನಿಲಯಕ್ಕೆ ಮೊದಲು ಕಾಯಕಲ್ಪ ನೀಡಿ, ಮುಂದಿನ ದಿನಗಳಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಊಟ ತಿಂಡಿ ಉಚಿತವಾಗಿ ಒದಗಿಸುವ ಯೋಚನೆ ತಮ್ಮ ಮನದಲ್ಲಿದೆ ಎಂದು ತಿಳಿಸಿದರು.
ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ ನೂತನ ಅಧ್ಯಕ್ಷ ಎಸ್.ಪುಟ್ಟಸ್ವಾಮಿ ಅವರಿಗೆ ಅಧಿಕಾರ ವಹಿಸಿಕೊಡಲಾಗುತ್ತಿದೆ. ಅವರು ಮುಂದಿನ ದಿನಗಳಲ್ಲಿ ಕುರುಬ ಸಮಾಜದ ಏಳಿಗೆಗೆ ಕೈಗೂಡಿಸಲಿದ್ದಾರೆ ಎಂದು ನುಡಿದರು.
ನೂತನ ಕಾರ್ಯಕಾರಿ ಸಮಿತಿ: ಎಸ್.ಪುಟ್ಟಸ್ವಾಮಿ ಅಧ್ಯಕ್ಷ, ಎಂ.ವಿ.ದಾಶರಥಿ ಕಾರ್ಯದರ್ಶಿ ಹಾಗೂ ನಿರ್ದೇಶಕರಾಗಿ ಸಣ್ಣಜವರೇಗೌಡ, ಬಿ.ಪಿ.ಮಂಜೇಗೌಡ, ಪಿ.ಎಚ್.ನಂಜುಂಡೇಗೌಡ, ಸಿ.ಕೆ.ಅಣ್ಣೇಗೌಡ, ತಳಾಲು ರಾಜೇಗೌಡ, ಪಟೇಲ್ ಜವರೇಗೌಡ, ಎಚ್.ಎಂ.ಅಣ್ಣೇಗೌಡ.
ಜಿ.ಕೆ.ನಾಗೇಶ್, ಕೃಷ್ಣೇಗೌಡ, ತಮ್ಮಣ್ಣಗೌಡ, ಶಿವಣ್ಣ, ಎ.ಡಿ.ಶಾಂತರಾಜು, ಎಚ್.ಎಂ.ಪರಮೇಶ್ವರ್, ಚಂದ್ರಹಾಸ, ಎಚ್.ಕೆ.ಹರೀಶ್, ಎಂ.ಎಸ್.ಮಂಜುನಾಥ್, ಎಂ.ಡಿ.ಪುಟ್ಟೇಗೌಡ, ಜಿ.ಡಿ.ಸ್ವಾಮಿಗೌಡ, ಡಿ.ರಮೇಶ್ ಹಾಗೂ ನಂಜೇಗೌಡ ನೂತನ ಕಾರ್ಯಕಾರಿ ಸಮಿತಿಗೆ ಆಯ್ಕೆಗೊಂಡರು.