5 ಕ್ಷೇತ್ರಗಳಲ್ಲೂ ಕಾಂಗ್ರೆಸ್ಗೆ ಸೋಲು ಕಟ್ಟಿಟ್ಟ ಬುತ್ತಿ: ಶೆಟ್ಟರ್
ಕನ್ನಡಪ್ರಭ ವಾರ್ತೆ ಹಾಸನ ಆ.11
ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಜನ ವಿರೋಧಿ ನೀತಿ ಹೆಚ್ಚಾಗಿದ್ದು, ಇದಕ್ಕೆ ಚುನಾವಣೆ ಮೂಲಕ ಉತ್ತರಿಸಲು ಪರಿಷತ್ ಹಾಗೂ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಮಾಡಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಮರ್ಥಿಸಿ ಕೊಂಡರು.
ಬೆಂಗಳೂರು ಗ್ರಾಮಾಂತರ, ಮಂಡ್ಯ ಲೋಕಸಭೆ ಉಪ ಚುನಾವಣೆ ಮತ್ತು ಮೂರು ವಿಧಾನಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಏನೇ ತಂತ್ರ, ಕುತಂತ್ರ ನಡೆಸಿದರೂ ಸೋಲು ಖಚಿತ. ಬಿಜೆಪಿ ಈಗಾಗಲೇ ಕಾಂಗ್ರೆಸ್ ಸೋಲಿಸಲು ಪಕ್ಷದ ಕಾರ್ಯಕರ್ತರಿಗೆ ಸಂದೇಶ ರವಾನಿಸಿದೆ. ತಾವು ಕೂಡ ಅಗತ್ಯ ಬಿದ್ದರೆ 2 ಲೋಕಸಭೆ ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡುವುದಾಗಿ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿಎಂ ದ್ವೇಷದ ರಾಜಕಾರಣ: ಆಸ್ತಿತ್ವಕ್ಕೆ ಬಂದ ಮೂರೇ ತಿಂಗಳಲ್ಲಿ ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿದೆ. ಅಧಿಕಾರಿಗಳಿಂದ ಉತ್ತಮ ರೀತಿಯಲ್ಲಿ ಕೆಲಸ ಮಾಡಿಸಲಾಗುತ್ತಿಲ್ಲ ಎಂಬುದು ಜಿಲ್ಲಾಧಿಕಾರಿ, ಜಿಪಂ ಸಿಇಓಗಳ ಸಭೆಯಲ್ಲಿ ಕಂಡು ಬರುತ್ತದೆ. ಅರಾಜಕತೆ, ದುರಾಡಳಿತ ಹೆಚ್ಚಿದೆ. ಹಿಂದಿನ ಸರ್ಕಾರಗಳ ಅತ್ಯುತ್ತಮ ಭಾಗ್ಯಲಕ್ಷ್ಮೀ, ಶಾಲಾ ಮಕ್ಕಳಿಗೆ ಬೈಸಿಕಲ್ ಕೊಡುವ ಮತ್ತಿತರ ಯೋಜನೆಗಳನ್ನು ರದ್ದುಪಡಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜನವಿರೋಧಿ ಮತ್ತು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆ ಚುನಾವಣೆ ಮೂಲಕ ಉತ್ತರಿಸಿಯೇ ತೀರಲಾಗುವುದು ಎಂದು ಶೆಟ್ಟರ್ ತಿಳಿಸಿದರು.
ಪ್ರತಿಪಕ್ಷಗಳ ನಡುವೆ ಹೊಂದಾಣಿಕೆಯಾಗಿದೆ, ಹೊರತು ಆಡಳಿತ ಪಕ್ಷ ನಡುವೆ ಅಲ್ಲ. ಜನರಿಂದ ದೂರವಾಗುತ್ತಿರುವ ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಟ ಮಾಡಲು ಪ್ರತಿಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುವುದರಲ್ಲಿ ತಪ್ಪೇನು ಇಲ್ಲ. ಮುಂದಿನ ಚುನಾವಣೆಗಳಲ್ಲಿ ಇದೇ ಮಾದರಿಯ ಮೈತ್ರಿ ಮುಂದುವರಿಸಬೇಕೋ, ಬೇಡವೋ ಎಂಬುದನ್ನು ಈ ಚುನಾವಣೆ ಫಲಿತಾಂಶದ ಆಧಾರದ ಮೇಲೆ ನಿರ್ಧರಿಸಲಾಗುವುದು ಎಂದು ವಾದಿಸಿದರು.
ಸಮನ್ವಯದ ಕೊರತೆ: ಕಾಂಗ್ರೆಸ್ ಶಾಸಕರು - ಮಂತ್ರಿಗಳ ನಡುವೆ ಹಾಗೂ ಕೆಪಿಸಿಸಿ ಅಧ್ಯಕ್ಷ - ಮುಖ್ಯಮಂತ್ರಿ ನಡುವೆ ಹೊಂದಾಣಿಕೆಯೇ ಇಲ್ಲ. ಎಲ್ಲರ ನಡುವೆ ಸಮನ್ವಯದ ಕೊರತೆ ಇದೆ. ಶಾಸಕರ ಮಾತಿಗೆ ಮುಖ್ಯಮಂತ್ರಿ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಪ್ರಜಾಸತ್ತಾತ್ಮಕವಾಗಿ ಚರ್ಚಿಸಿ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಓನ್ಮ್ಯಾನ್ ಶೋ ಮಾಡುತ್ತಿದ್ದಾರೆ. ಅಧಿಕಾರಿಗಳು ಯಾರ ಮಾತನ್ನು ಕೇಳುತ್ತಿಲ್ಲ. ಇದು ಮುಂದಿನ ದಿನಗಳಲ್ಲಿ ರಾಜ್ಯಾಡಳಿತ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿಂದೆ ಧಾರವಾಡ ಜಿಲ್ಲೆಯ ಬೇಲೂರಿಗೆ ಬಂದಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರು, ಕೆಳಹಂತದ ಆಡಳಿತ ಸದೃಢಗೊಳಿಸಲು ಬೇಲೂರು ಘೋಷಣೆ ಮಾಡಿದರು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಗ್ರಾಪಂ ಅಧ್ಯಕ್ಷರು, ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸುವ ಕಾಯ್ದೆಯನ್ನು ಜಾರಿಗೆ ತಂದಿದೆ. ಸುವರ್ಣ ಗ್ರಾಮ ಯೋಜನೆಯಲ್ಲಿ ಪ್ರತಿ ಗ್ರಾಪಂಗೆ 1 ರಿಂದ 2 ಕೋಟಿ ರು. ಅನುದಾನ ನೀಡಿ, ಗ್ರಾಮಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿತ್ತು. ಹಾಗೆಯೇ ನಮ್ಮ ಗ್ರಾಮ- ನಮ್ಮ ರಸ್ತೆ ಯೋಜನೆಯಡಿ ಪ್ರತಿ ಗ್ರಾಮದ 50 ಕಿ. ಮೀ. ರಸ್ತೆ ಅಭಿವೃದ್ಧಿ ಪಡಿಸಲು ಅನುದಾನ ನೀಡಲಾಗುತ್ತಿತ್ತು. ಇಂತಹ ಅತ್ಯುತ್ತಮ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರದ್ದುಪಡಿಸಿರುವುದು ಸರ್ವತ ಸರಿಯಲ್ಲ ಎಂದು ಹೇಳಿದರು.
ಯಾವುದೇ ಪಕ್ಷದ ರಾಜಕಾರಣಿಗಳು ಚುನಾವಣೆ ಪ್ರಚಾರ ವೇಳೆ ವ್ಯಕ್ತಿ ವೈಯಕ್ತಿಕ ವಿಷಯಗಳ ಆಧಾರದ ಮೇಲೆ ಟೀಕೆ, ಟಿಪ್ಪಣೆ ಮಾಡುವುದು ಸರಿಯಲ್ಲ. ವಿಷಯಾಧಾರಿತ ಪ್ರಚಾರ ನಡೆಯಬೇಕು ಎಂದು ಪ್ರತಿಕ್ರಿಯಿಸಿದರು. ಬಿಜೆಪಿ ಮುಖಂಡ ನವಿಲೆ ಅಣ್ಣಪ್ಪ, ಎಂ.ಆರ್. ರವಿ, ನಾಗೇಶ್, ಮಂಜುನಾಥ್ ಶರ್ಮ, ಪ್ರಸನ್ನಕುಮಾರ್ ಇತರರು ಇದ್ದರು.