ಒಂದೆಡೆ ಅತಿವೃಷ್ಟಿ, ಇನ್ನೊಂದೆಡೆ ಅನಾವೃಷ್ಟಿ
ಹಾಸನ: ರಾಜ್ಯದ ನಾನಾ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಅತಿವೃಷ್ಟಿ ಉಂಟಾಗಿದ್ದರೆ, ಅದೇ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡು ಉಂಟಾಗಿ ಕೋಟ್ಯಂತರ ರು.ಗಳ ನಷ್ಟ ಉಂಟಾಗಿದೆ.
ಜಿಲ್ಲೆಯ 8 ತಾಲೂಕುಗಳ ಪೈಕಿ ಹೆಚ್ಚಿನ ತಾಲೂಕುಗಳಲ್ಲಿ ಅತಿವೃಷ್ಟಿ ಉಂಟಾಗಿದ್ದರೆ, ಅದೇ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಅನಾವೃಷ್ಟಿಯಿಂದ ಸಾಕಷ್ಟು ಬೆಳೆ ಹಾನಿಯಾಗಿದೆ. ಹೀಗಾಗಿ ಜಿಲ್ಲೆ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಎರಡಕ್ಕೂ ತುತ್ತಾಗಿದೆ.
ಕಳೆದ 1 ತಿಂಗಳಿಂದ ಸತತವಾಗಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಹೆಚ್ಚಾಗಿ ಮಲೆನಾಡು ಭಾಗದಲ್ಲಿ ನೂರಾರು ಕೋಟಿ ರು.ನಷ್ಟು ಪ್ರಮಾಣದ ಬೆಳೆ ಮತ್ತು ಆಸ್ತಿಪಾಸ್ತಿ ನಷ್ಟವಾಗಿದೆ. ಆದರೆ ಬಯಲುಸೀಮೆ ಪ್ರದೇಶಗಳಾದ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಮಳೆಯೇ ಇಲ್ಲದೆ ಸಾವಿರಾರು ತೆಂಗಿನ ಮರಗಳು ಸಂಪೂರ್ಣವಾಗಿ ಒಣಗಿ ಹೋಗಿವೆ.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆಯಾಗದೇ ಬರಗಾಲ ಹೆಚ್ಚಾಗಿ ಅನ್ನದಾತ ಕಂಗಾಲಾಗಿದ್ದ. ಆದರೆ ಈ ಬಾರಿ ಉತ್ತಮ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಹಾಸನ, ಹೊಳೆನರಸೀಪುರ, ಅರಕಲಗೂಡು, ಬೇಲೂರು, ಆಲೂರು ಮತ್ತು ಸಕಲೇಶಪುರದಲ್ಲಿ ರೈತರು ಖುಷಿಯಿಂದ ಬಿತ್ತನೆ ಕಾರ್ಯ ಕೈಗೊಂಡಿದ್ದರು. ಆದರೆ ಅತಿಯಾದ ಮಳೆಯಿಂದಾಗಿ ರೈತರು ಬಿತ್ತಿದ ಬೆಳೆಗಳೆಲ್ಲ ಸಂಪೂರ್ಣ ನಾಶವಾಗಿದೆ.
ಆದರೆ, ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಮಳೆಯೇ ಇಲ್ಲದೆ ಸಹಸ್ರಾರು ತೆಂಗಿನ ಮರಗಳು ಒಣಗಿ ಹೋಗಿವೆ. ಅಲ್ಲದೆ ಕುಡಿಯಲು ಸಹ ನೀರಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣಾಗಿದೆ.
ವಿಶೇಷ ಪ್ಯಾಕೇಜ್ಗೆ ಶಾಸಕರ ಒತ್ತಾಯ: ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಿಲ್ಲೆಯಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂಬಂಧ ರೈತರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಜಿಲ್ಲೆಯ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಹಾಗೂ ಎಚ್.ಕೆ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಅತಿಯಾದ ಮಳೆಯಿಂದಾಗಿ ಸುಮಾರು 300 ಕೋಟಿ ರು.ಗೂ ಹೆಚ್ಚು ಹಾನಿ ಉಂಟಾಗಿ ಅಪಾರ ಆಸ್ತಿ-ಪಾಸ್ತಿ ನಷ್ಟವಾಗಿದೆ. ರಸ್ತೆಗಳು, ಸೇತುವೆಗಳು, ಮನೆಗಳು ಹಾಳಾಗಿದ್ದರೆ, ಕಾಫಿ ತೋಟಗಳಿಗೆ ನೀರು ನುಗ್ಗಿ ಕಾಫಿ ಗಿಡಗಳು ಸಂಪೂರ್ಣವಾಗಿ ನಾಶವಾಗಿವೆ. ಗದ್ದೆಗಳು ಹಾಳಾಗಿದ್ದು, ಯೋಗ್ಯ ಹಾಗೂ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ. ಹಾಗಾಗಿ ಕೂಡಲೇ ಮಲೆನಾಡಿನಲ್ಲಿ ಆಗಿರುವ ಅತಿವೃಷ್ಟಿಗೆ ಸೂಕ್ತ ಪರಿಹಾರ ನೀಡುವಂತೆ ಶಾಸಕರು ಒತ್ತಾಯಿಸಿದ್ದಾರೆ.
ತಿಂಗಳಿನಿಂದ ಜಿಲ್ಲೆಯಲ್ಲಿ ಎಡೆಬಿಡದೆ ಸುರಿದ ಮಳೆಗೆ ಅದರಲ್ಲೂ ಸಕಲೇಶಪುರ-ಆಲೂರು ತಾಲೂಕುಗಳಲ್ಲಿ ಹೆಚ್ಚಿನ ನಷ್ಟ ಸಂಭವಿಸಿದೆ. ಬಹುತೇಕ ಕಡೆ ರಸ್ತೆಗಳು ಮಳೆಯ ರಭಸಕ್ಕೆ ಕೊಚ್ಚಿಹೋಗಿದ್ದರೆ, ಸಾಕಷ್ಟು ಕಡೆಗಳಲ್ಲಿ ಭೂಕುಸಿತದಿಂದಾಗಿ ಗ್ರಾಮಗಳ ಸಂಪರ್ಕವೇ ಕಡಿದು ಹೋಗಿದೆ.
ಈಗಷ್ಟೇ ನಾಟಿ ಮಾಡಿದ್ದ ಬತ್ತದ ಗದ್ದೆಗೆ ನೂರು ನುಗ್ಗಿ ಕೆರೆಯಂತೆ ನಿರ್ಮಾಣವಾಗಿದೆ. ಸೇತುವೆಗಳು ಕುಸಿದಿದ್ದು, ಅನೇಕ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದರಿಂದ ಹತ್ತಾರು ಗ್ರಾಮಗಳು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ತಿಂಗಳ ಕಾಲ ವಿದ್ಯುತ್ ಸಂಪರ್ಕವಿಲ್ಲದೆ ಹೆಚ್ಚಿನ ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿಗೆ ಅತಿಯಾದ ತೇವಾಂಶದಿಂದ ಕೊಳೆ ರೋಗಕ್ಕೆ ತುತ್ತಾಗಿ ಬೆಳೆಗಾರರಲ್ಲಿ ಆಂತಕ ಸೃಷ್ಟಿಯಾಗಿದೆ. ಮಾರ್ಚ್ನಲ್ಲಿ ಕೊಂಚ ಬಿದ್ದ ಉತ್ತಮ ಮಳೆಯಾಗಿ ಕಾಫಿ ಗಿಡ ಹೂ ಕಟ್ಟಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿ ಇದ್ದರು.
ಆದರೆ ಮಲೆನಾಡಿಯಲ್ಲಿ ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಕಾಫಿ ಗಿಡಕ್ಕೆ ಕೊಳೆರೋಗ ಕಾಣಿಸಿಕೊಂಡು ಹೂ ಕಚ್ಚುವ ಮುನ್ನವೆ ಉದುರಿ ಹೋಗುತ್ತಿವೆ. ಹೀಗಾಗಿ ಬೆಳೆಗಾರರು ತೀವ್ರ ಆತಂಕದಲ್ಲಿದ್ದು, ಪರಿಹಾರದ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದ್ದಾರೆ. ವಿಪರ್ಯಾಸ ಅಂದ್ರೆ ಹಾಸನ, ಸಕಲೇಶಪುರ, ಆಲೂರು, ಅರಕಲಗೂಡು ಮತ್ತು ಬೇಲೂರು ತಾಲೂಕಿನ ಬಹುತೇಕ ಕಡೆಗಳಲ್ಲಿ ಅತಿವೃಷ್ಟಿಯಿಂದ ಹಾನಿ ಸಂಭವಿಸಿದ್ದರೆ, ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಮಳೆಯೇ ಇಲ್ಲದೆ ಲಕ್ಷಾಂತರ ತೆಂಗಿನ ಮರಗಳು ಒಣಗಿ ನಿಂತಿವೆ. ಹೀಗಾಗಿ ಒಂದೆಡೆ ಅತಿವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿ ಸಂಭವಿಸಿರುವುದರಿಂದ ಸರ್ಕಾರ ನೆರವಿಗೆ ಮುಂದಾಗಬೇಕಾಗಿದೆ.
ಪಿ.ರವಿಕುಮಾರ್