ಕೃಷಿ ಸಾಲದ ಬಡ್ಡಿ ಸಹಾಯಧನ ಪಾವತಿ: ಸಚಿವ ಮಹಾದೇವ ಪ್ರಸಾದ್
ಕನ್ನಡಪ್ರಭ ವಾರ್ತೆ ಹಾಸನ ಆ.11
ಕೃಷಿ ಸಾಲಗಳ ಮೇಲಿನ ಬಡ್ಡಿ ಸಹಾಯಧನ ಯೋಜನೆಯಲ್ಲಿ 2013-14ನೇ ಸಾಲಿನ ಆಯವ್ಯಯದಲ್ಲಿ 300 ಕೋಟಿ ರು. ಅವಕಾಶ ಕಲ್ಪಿಸಿದ್ದು, ಪಾವತಿಸಲು ಬಾಕಿ ಇರುವ ಬಡ್ಡಿ ಸಹಾಯಧನವನ್ನು ಪಾವತಿಸಲಾಗುವುದು. ಹಾಗೂ ಸರ್ಕಾರದಿಂದ ಸಹಕಾರ ಬ್ಯಾಂಕುಗಳಿಗೆ ಬಡ್ಡಿ ಸಹಾಯ ಧನವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಬ್ಯಾಂಕಿನ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುವ ಪ್ರಶ್ನೆ ಉದ್ಭಿಸುವುದಿಲ್ಲವೆಂದು ಸಹಕಾರ ಸಚಿವ ಮಹದೇವ ಪ್ರಸಾದ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಕೃಷಿ ಸಾಲಗಳ ಮೇಲಿನ ಬಡ್ಡಿ ಸಹಾಯಧನ ಯೋಜನೆಯಲ್ಲಿ 2012-13 ನೇ ಸಾಲಿನ ಮಾರ್ಚ್ ಅಂತ್ಯದವರೆಗೆ ಬಂದ ಬಡ್ಡಿ ಸಹಾಯಧನ ಬಿಲ್ಲುಗಳ 160.89 ಕೋಟಿ ರು. ಮತ್ತು 2013-14ನೇ ಸಾಲಿನ ಮೇ 2013ರಲ್ಲಿ ಬಂದ ಬಡ್ಡಿ ಸಹಾಯಧನದ ಬಿಲ್ಲುಗಳು 52.52 ಕೋಟಿ ರು.ಗೆ ಒಟ್ಟು 213.41 ಕೋಟಿ ರು. ಬಡ್ಡಿ ಸಹಾಯಧನ ಬಿಡುಗಡೆ ಮಾಡಲು ಬಾಕಿ ಇರುತ್ತದೆ. ಸರ್ಕಾರದಿಂದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಗೆ ಒಟ್ಟು ರು. 213.41 ಕೋಟಿ ಬಡ್ಡಿ ಸಹಾಯಧನ ಪಾವತಿಸಲು ಬಾಕಿ ಇರುತ್ತದೆ ಎಂದು ಪ್ರಸಾದ್ ತಿಳಿಸಿದ್ದಾರೆ.
ಸಹಕಾರ ಸಂಘಗಳ ನಿಬಂಧಕರ ಕಚೇರಿಗೆ 140 ಕೋಟಿ ರು. ಮೊತ್ತದ ಕ್ಲೇಮ್ ಬಿಲ್ಲುಗಳು ಬಂದಿದ್ದು ಇವು ಪುನರ್ ಪರಿಶೀಲನೆಯಾಗುತ್ತಿದ್ದು ಈ ಮೊತ್ತವನ್ನು ಬಿಡುಗಡೆ ಮಾಡಬೇಕಾಗಿದೆ. ಸಾಲ ಮನ್ನಾದ ಬಡ್ಡಿ ಹೊರೆಯನ್ನು ತಪ್ಪಿಸುವ ಸಲುವಾಗಿ ಅಪೆಕ್ಸ್ ಬ್ಯಾಂಕಿನಿಂದ ಪುನರ್ ಪರಿಶೀಲನೆಗೊಂಡ ಬಿಲ್ಲುಗಳಿಗೆ 326.90 ಕೋಟಿ ರು. ಗಳನ್ನು ಬಿಡುಗಡೆ ಮಾಡಿದೆ. ಸಹಕಾರ ಸಂಸ್ಥೆಗಳಿಂದ ಸಹಕಾರ ಸಂಘಗಳ ನಿಬಂಧಕರಿಗೆ ಬಂದ ಬಿಲ್‌ಗಳ ಪುನರ್ ಪರಿಶೀಲನೆಯಾಗಿ ಸರ್ಕಾರಕ್ಕೆ ಬಂದ ಕೂಡಲೇ ಈ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ.