ಕ್ರೀಡೆ ಮಕ್ಕಳ ದೈಹಿಕ, ಮಾನಸಿಕ ಸದೃಢತೆಗೆ ಸಹಕಾರಿ: ಚಂದ್ರೇಗೌಡ
ಕ.ಪ್ರ ವಾರ್ತೆ ಬೇಲೂರು ಆ.11
ಕ್ರೀಡೆ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಸಹಕಾರಿ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಡಿ. ಚಂದ್ರೇಗೌಡ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಸನ್ಯಾಸಿಹಳ್ಳಿ ಗ್ರಾಮ ಪಂಚಾಯ್ತಿ ಸಂಯುಕ್ತವಾಗಿ ಹೊಸಉತ್ಪಾತನ ಹಳ್ಳಿಯಲ್ಲಿ ಏರ್ಪಡಿಸಿದ್ದ ಹಿರಿಯ ಪ್ರಾಥಮಿಕ ಶಾಲೆಯ ಕ್ಲಸ್ಟರ್ ಬಿ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಸದಾ ಚುಟುವಟಿಕೆಗಳಿಂದ ಕೂಡಿದ್ದರೆ ಜ್ಞಾನವೃದ್ಧಿಯಾಗುತ್ತದೆ ಎಂದರು.
ಸರ್ಕಾರ ಪ್ರತಿ ಶಾಲೆಗೂ ದೈಹಿಕ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು. ತೀರ್ಪುಗಾರರು ಅರ್ಹತೆ ಆಧರಿಸಿ ತೀರ್ಪು ನೀಡಬೇಕೆಂದು ಮನವಿ ಮಾಡಿದರು.
ತಾಲೂಕು ಕೇಂದ್ರದಲ್ಲಿ ಕ್ರೀಡಾಕೂಟ ನಡೆಸುವ ಉದ್ದೇಶವಿತು.್ತ ಗ್ರಾಮಸ್ಥರು ಹೆಚ್ಚು ಸಹಕಾರ ನೀಡಿ ನಡೆಸುತ್ತಿದ್ದಾರೆ. ಗ್ರಾಮೀಣ ಕ್ರೀಡೆಗೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ದೈಹಿಕ ಶಿಕ್ಷಣ ಅಧೀಕ್ಷಕ ರಂಗಸ್ವಾಮಿ ಮಾತನಾಡಿ, ಶಾಲೆಗೆ ಆಟದ ಮೈದಾನದ ಕೊರತೆ ಇದ್ದರೂ ಜವಾಬ್ದಾರಿ ತೆಗೆದು ಕೊಂಡು ಕ್ರೀಡಾಕೂಟ ನಡೆಸುತ್ತಿರುವುದು ಸಂತಸ ತಂದಿದೆ. ಬಿ.ಡಿ.ಚಂದ್ರೇಗೌಡರು ಜಿಪಂ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತಲಾ 1 ಲಕ್ಷ ರು.ನಂತೆ 20 ಲಕ್ಷ ರು ಅನುದಾನವನ್ನು ಕ್ರೀಡಾ ಉಪಕರಣ, ಮೈದಾನ ಸಮತಟ್ಟು ಇದಕ್ಕೆ ನೀಡಿರುವುದನ್ನು ಸ್ಮರಿಸಿಕೊಂಡರು.
ಗ್ರಾಪಂ ಅಧ್ಯಕ್ಷೆ ಲತಾಮೋಹನ್ ಮಾತನಾಡಿ, ಕ್ರೀಡೆ ಜತೆ ಓದಿನ ಕಡೆಗೂ ಗಮನ ನೀಡಬೇಕು. ಸರಕಾರ ಕ್ರೀಡೆಗೆ ಹೆಚ್ಚು ಗಮನ ಹರಿಸಬೇಕಿದೆ. ಕೆಳ ಹಂತದಲ್ಲೆ ಕ್ರೀಡೆಗೆ ಪ್ರೋತ್ಸಾಹ ನೀಡದಿದ್ದರೆ ಉನ್ನತ ಮಟ್ಟದಲ್ಲಿ ಹೇಗೆ ತಾನೆ ಸ್ಥಾನ ಗಳಿಸಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.
ಎಸ್ಡಿಎಂಸಿ ಅಧ್ಯಕ್ಷೆ ವೀಣಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕಿ ಗೀತಾ, ಚಂದ್ರಶೇಖರ್, ಗ್ರಾಪಂ ಪಿಡಿಓ ಕೊಮಾರಯ್ಯ, ಗೌಡೇಗೌಡ ಇದ್ದರು.