ಜಿಲ್ಲೆಯ ಅಲ್ಲಲ್ಲಿ ಅಕ್ರಮ ಮದ್ಯ ಮಾರಾಟ: ಮೂವರು ಬಂಧನ
ಹಾಸನ: ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ, ನೇರಲಕೆರೆ ಗ್ರಾಮದ ಪರಶುರಾಮಪ್ಪ (31) ತಮ್ಮ ಮನೆಯ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.ಮಾರಾಟಕ್ಕಿಟ್ಟದ್ದ 47 ಮದ್ಯದ ಪೌಚ್ ವಶಪಡಿಸಿಕೊಂಡಿರುವ ಅರೇಹಳ್ಳಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಅರೇಹಳ್ಳಿ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದ ರಾಜು (45) ತಮ್ಮ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಮದ್ಯ ಮಾರಾಟಕ್ಕಿಟ್ಟದ್ದ 28 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವ ಅರೇಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅರಸೀಕೆರೆ ತಾ ಅಗ್ಗುಂದ ಗ್ರಾಮದ ಶಿವಲಿಂಗಮ್ಮ ಪ್ರೌಢಶಾಲೆಯ ಹತ್ತಿರ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಅಗ್ಗುಂದ ಗ್ರಾಮದ ಉಮಾಮಹೇಶ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.