ನಿತ್ಯ ರಾಷ್ಟ್ರ ಧ್ವಜಾರೋಹಣ ಮಾಡದಿದ್ದರೆ ಕಠಿಣ ಶಿಕ್ಷೆ: ತಾಪಂ ಸಿಇಓ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಅರಕಲಗೂಡು ಆ.11
ನಾಳಿನ ಸ್ವಾತಂತ್ರ್ಯ ದಿನಾಚರಣೆಯಿಂದ ವರ್ಷ ಪೂರ್ತಿ ತಾಲೂಕಿನ ಎಲ್ಲ ಸರ್ಕಾರಿ ಮತ್ತು ಗ್ರಾಪಂ ಕಚೇರಿಗಳ ಮೇಲೆ ರಾಷ್ಟ್ರ ಧ್ವಜಾರೋಹಣ ತಪ್ಪದೇ ಪ್ರತಿ ದಿನ ಮಾಡಬೇಕು. ಇದಕ್ಕೆ ತಪ್ಪಿದಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶಿವರಾಂ ಎಚ್ಚರಿಸಿದ್ದಾರೆ.
ಜಿಲ್ಲಾ ಭಾರತ ಸೇವಾದಳದ ಸಹಯೋಗದೊಂದಿಗೆ ತಾಲೂಕಿನ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಿಗೆ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಈ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ರಾಷ್ಟ್ರ ಧ್ವಜದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ, ಭಾರತ ಸರ್ಕಾರದ ಮಾರ್ಗದರ್ಶನ ಮೇರೆಗೆ
ಪ್ರಾಯೋಗಿಕವಾಗಿ ಈ ವರ್ಷದಿಂದ ಜಾರಿಗೆ ತರಲಾಗುತ್ತಿದೆ. ಧ್ವಜ ಹಾರಿಸಲು ದಿನಕ್ಕೆ 20 ರು. ಗಳನ್ನು ನೀಡಿ ವ್ಯಕ್ತಿಯೊಬ್ಬನನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ನೌಕರರು ಮತ್ತು ಅಧಿಕಾರಿಗಳ ವಿರುದ್ಧ ನಿರ್ಧಾಕ್ಷ್ಯಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದರು. ರಾಷ್ಟ್ರ ಧ್ವಜ ಕುರಿತು ಮಾಹಿತಿ ನೀಡಿ ಮಾತನಾಡಿದ ಭಾರತ ಸೇವಾ ದಳದ ಸಂಯೋಜಕ ಮಹೇಶ್, ವಂದೇ ಮಾತರಂ ರಾಷ್ಟ್ರೀಯ ಹಾಡಾಗಿದೆ. ಜನಗಣಮನ ರಾಷ್ಟ್ರಗೀತೆಯಾಗಿದೆ. ಧ್ವಜ ಹಾರಿಸುವ ಸಂದರ್ಭದಲ್ಲಿ ಇವನ್ನು ಕ್ರಮಬದ್ಧವಾಗಿ ಹಾಡಬೇಕು. ರಾಷ್ಟ್ರಧ್ವಜದ ಬಳಿ ಯಾವುದೇ ಫೋಟೋಗಳನ್ನು ಇಡುವಂತಿಲ್ಲ ಮತ್ತು ಹಾಜರಿರುವ ಅತಿಥಿಗಳಿಗೆ ಸ್ವಾಗತ, ವಂದನೆಗಳನ್ನು ಕೋರುವಂತಿಲ್ಲ. ರಾಷ್ಟ್ರಧ್ವಜದ ಮುಂದೆ ಯಾರೂ ದೊಡ್ಡವರಲ್ಲ ಎಂದು ತಿಳಿಸಿದರು. ಧ್ವಜ ಕಂಬದ ಬಳಿಯೂ ಯಾವುದೇ ಭೂಪಟ ಬಿಡಿಸುವಂತಿಲ್ಲ. ಯಾವ ಸಂದರ್ಭದಲ್ಲೂ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಒದ್ದೆಯಾದ ಧ್ವಜವನ್ನು ಒಣಗಿಸಲು ಸಹಾ ಕ್ರಮವಿದೆ ಎಂದು ವಿವರಿಸಿದರು.
ಸೇವಾದಳದ ಜಿಲ್ಲಾ ಸಂಯೋಜಕಿ ರಾಣಿ ಮಾತನಾಡಿ, ಖಾದಿ ಭಂಡಾರದಿಂದ ಧ್ವಜ ಖರೀದಿಸಿ ಧ್ವಜದ ನಿಯಮಗಳನ್ನು ಪಾಲಿಸಿ ಎಂದು ಹೇಳಿದರು. ನಂತರ ಧ್ವಜಾರೋಹಣ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಪಂಚಾಯ್ತಿ ವಿಸ್ತರಣಾಧಿಕಾರಿ ಪ್ರಭಾಕರ್, ವ್ಯವಸ್ಥಾಪಕಿ ಚಂದ್ರಕಲಾ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ನಟರಾಜ್ ಇತರರು ಇದ್ದರು.