ಮಳೆ ಬಿಡುವು: ನಿಟ್ಟುಸಿರು ಬಿಟ್ಟ ಮಲೆನಾಡು ಜನತೆ
ಕ.ಪ್ರ. ವಾರ್ತೆ ಸಕಲೇಶಪುರ ಆ.11
ಜಿಲ್ಲೆಯಲ್ಲಿ ಜೂನ್ ಮೊದಲ ವಾರದಿಂದ ಆರಂಭವಾದ ಮುಂಗಾರು ಮಳೆ ನಿರಂತರ ಎರಡು ತಿಂಗಳು ಸುರಿದು ಇದೀಗ ಬಿಡುವು ನೀಡಿರುವ ಹಿನ್ನೆಲೆಯಲ್ಲಿ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಸತತ ಮಳೆಯಿಂದಾಗಿ ಕಂಗೆಟ್ಟಿದ್ದ ಜನರಿಗೆ ಆಗಸ್ಟ್ ಮೊದಲಲ್ಲಿ ಸುರಿದ ಮಳೆ ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟು ಮಾಡಿದ್ದರೆ, ಕಾಫಿ,ಏಲಕ್ಕಿ, ಮೆಣಸು ಹಾಗೂ ಭತ್ತದ ಗದ್ದೆಗಳ ನಷ್ಟ ಊಹೆಗೂ ನಿಲುಕದಷ್ಟಾಗಿದ್ದು, ಹಲವು ರೋಗಗಳ ಉತ್ಪತ್ತಿಗೂ ಕಾರಣವಾಗಿತ್ತು.
ಇದರಿಂದಾಗಿ ಮಳೆ ಬಿಡುವು ನೀಡಿದರೆ ಸಾಕೆಂಬ ಮನಸ್ಥಿತಿಯಲ್ಲಿ ರೈತರು, ಬೆಳೆಗಾರರು ಇದ್ದರು. ಪ್ರಸ್ತುತ ಮಳೆ ಬಿಡುವು ನೀಡಿದೆ. ಆದರೆ, ಅತಿಯಾದ ಮಳೆಯಿಂದಾಗಿ ಕೂಳೆ ರೋಗಕ್ಕೆ ತುತ್ತಾಗಿ ಉದುರುತ್ತಿರುವ ಕಾಫಿ ಕಾಯಿ ಸಂರಕ್ಷಣೆಗಾಗಿ ರೋಗ ನಿರೋಧಕ ಸಿಂಪರಣೆಗೆ ಬೆಳೆಗಾರರು ಮುಂದಾಗಿದ್ದಾರೆ.
ಅತಿಯಾದ ಗಾಳಿ ಮಳೆಯಿಂದ ಮರಕ್ಕೆ ಹಬ್ಬಿದ್ದ ಕಾಳುಮೆಣಸಿನ ಬಳ್ಳಿಗಳು ಮರದಿಂದ ಬೇರೆಯಾಗಿ ನೆಲಕ್ಕೆ ಬಿದ್ದಿದ್ದು ಕೋಟ್ಯಂತರ ಹಾನಿ ಸಂಭವಿಸಿದ್ದರೆ ಕರಿಮೆಣಸು ಹೂವು ಉದುರಿ ಮುಂದಿನ ಹಂಗಾಮಿಗೆ ವ್ಯಾಪಕ ಹಾನಿ ಸಂಭವಿಸುವುದನ್ನು ತಪ್ಪಿಸಲು ಮಳೆ ಬಿಡುವು ಅಗತ್ಯವಾಗಿತ್ತು.
ಇದಲ್ಲದೆ ಅತಿಯಾದ ಪ್ರವಾಹದಿಂದ ಮುರಿದ ಹಳ್ಳಗಳ ಬದುವನ್ನು ಸರಿಪಡಿಸಲು ಹಾಗೂ ಬತ್ತದ ಗದ್ದೆಗಳಿಗೆ ರಸಗೊಬ್ಬರ ನೀಡಲು ಮಳೆ ಬಿಡುವು ನೀಡುವುದು ಅಗತ್ಯವಾಗಿದ್ದು, ಈ ಎಲ್ಲಾ ಕೆಲಸಗಳಿಗೆ ಚಾಲನೆ ನೀಡಿರುವ ರೈತಾಪಿ ಜನತೆ ಬೆಳೆ ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿದ್ದಾರೆ.
ದೈತ್ಯ ಮಳೆ: ವ್ಯಾಪಕ ಬೀಸಿದ ಗಾಳಿ ಹಾಗೂ ಕಳೆದ 3 ದಶಕಗಳ ಇತಿಹಾಸದಲ್ಲೇ ಸುರಿಯದ ಮಳೆಯಿಂದಾಗಿ ಭತ್ತದ ಗದ್ದೆಗಳು ಹಾಗೂ ಕಾಫಿ ತೋಟಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು, ರೈತ ಉಚ್ಚಂಗಿ ಗ್ರಾಮದ ನಾಗರಾಜ್ ಎಂಬುವವರ ಉತ್ತಮ ಸ್ಥಿತಿಯಲ್ಲಿದ್ದ 3 ಎಕರೆ ಕಾಫಿ ತೋಟ ಭೂ ಕುಸಿತದಿಂದ ಸಂಪೂರ್ಣ ಬುಡಮೇಲಾಗಿದ್ದು ತೋಟದಲ್ಲಿದ್ದ ಮರಗಳು ಉಳಿಯದಾಗಿದ್ದು ಅವರ ಮುಂದಿನ ಭವಿಷ್ಯ ಕರಾಳವಾಗಿದೆ.
ಇದೇ ರೀತಿ ಬೆಕ್ಕಿನಹಳ್ಳಿ ಗ್ರಾಮದ ಸುಬ್ರಮಣ್ಯ ಎಂಬುವವರ ಎರಡು ಎಕರೆ ಏಲಕ್ಕಿ, ಕಾಫಿ, ಅಡಕೆ, ಎರಡು ಎಕರೆ ಕಾಫಿ ತೋಟ ಭೂಕುಸಿತದಿಂದಾಗಿ ತಗ್ಗು ಪ್ರದೇಶದಲ್ಲಿದ್ದ ಭತ್ತದ ಗದ್ದೆಗೆ ಕುಸಿದಿದ್ದು ಇದರಿಂದಾಗಿ ಸುಬ್ರಮಣ್ಯ ಅವರ ಕಾಫಿ ತೋಟ ನಾಶವಾಗಿದ್ದು, ತಗ್ಗು ಪ್ರದೇಶದಲ್ಲಿದ್ದ ಮತ್ತೂರು ಗ್ರಾಮದ ರೈತರ 10 ಎಕರೆ ಭತ್ತದ ಗದ್ದೆ ನಾಶವಾಗಿವೆ.
ಅರೆಕೆರೆ ಗ್ರಾಮದ ವಳಲೇಹಳ್ಳದಲ್ಲಿ ಅತಿಯಾದ ನೀರು ಹರಿದು ಹಳ್ಳದ ದಿಬ್ಬ ಒಡೆದ ಪರಿಣಾಮ ಗ್ರಾಮದ ಮಹೇಶ್ ಎಂಬುವವರ ಭತ್ತದ ಗದ್ದೆಗಳು ಸೇರಿದಂತೆ ಸುಮಾರು 20 ಎಕರೆ ಭತ್ತದ ಗದ್ದೆಯಲ್ಲಿ ಮಣ್ಣು ಶೇಖರವಾಗಿರುವುದರಿಂದ ಮಣ್ಣು ತೆಗೆಸಲು ಸಾಧ್ಯವಾಗದೆ ಗದ್ದೆಗಳನ್ನು ಪಾಳು ಬೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಈ ಬಾರಿ ಹುಚ್ಚು ಮಳೆಗೆ ಸಿಲುಕಿ ಹಲವರ ಬದುಕನ್ನೆ ಸರ್ವ ನಾಶಮಾಡಿರುವ ಮಳೆ ಸದ್ಯ ಬಿಡುವು ನೀಡಿರುವುದರಿಂದಾಗಿ ರೈತರ ಮುಖದಲ್ಲಿ ಸಂತೊಷದ ಕಳೆ ಉಕ್ಕುವಂತೆ ಮಾಡಿದೆ.
ಪ್ರಾಥಮಿಕ ವರದಿ: ವಿವಿಧ ಇಲಾಖೆಗಳು ಬೆಳೆನಾಶ ಕುರಿತು ಪ್ರಾಥಮಿಕ ವರದಿ ನೀಡಿದ್ದು ಇದರಲ್ಲಿ 4500 ಹೆಕ್ಟೇರ್ ಬತ್ತದ ಬೆಳೆ ಹಾಗೂ 1430 ಹೆ. ಏಲಕ್ಕಿ 600 ಹೆ. ಕರಿಮೆಣಸು ನಾಶವಾಗಿದ್ದು ಶೇ 30 ರಷ್ಟು ಕಾಫಿ ಉದುರಿದೆ ಎಂಬ ವರದಿ ನೀಡಿದ್ದು ಇನ್ನೊಂದು ವಾರದಲ್ಲಿ ಸಂಪೂರ್ಣ ಹಾನಿಯ ವರದಿ ಲಭ್ಯವಾಗಲಿದೆ.
ಹೆಚ್ಚಿನ ಪರಿಹಾರಕ್ಕೆ ಆಗ್ರಹ
ಶಾಸಕ ಎಚ್.ಕೆ ಕುಮಾರಸ್ವಾಮಿ, ಹಾಸನ ಬೆಳೆಗಾರರ ಸಂಘದ ಅಧ್ಯಕ್ಷ ಮುಜಾಹೀದ್ ಆಲಂ ಹಾಗೂ ವಿವಿಧ ಪಕ್ಷದ ಮುಖಂಡರು ಹೆಚ್ಚಿನ ಪರಿಹಾರಕ್ಕಾಗಿ ಆಗ್ರಹಿಸಿದ್ದು, ಪ್ರಸ್ತುತ ಪ್ರತಿ ಹೆಕ್ಟೇರ್ ಬೆಳೆಗೆ 8 ಸಾವಿರ ರು. ಪರಿಹಾರ ನೀಡಲಾಗುತ್ತಿದ್ದು ಅದನ್ನು 25 ಸಾವಿರು ರು.ಗಳಿಗೆ ಏರಿಸ ಬೇಕು ಎಂದು ಆಗ್ರಹಿಸಿದ್ದಾರೆ. ಒಂದು ಕಾಫಿ ಗಿಡ ನಾಶವಾದರೆ ನೂರು ರು. ಗಳನ್ನು ನೀಡಲಾಗುತ್ತಿದೆ. ಇದನ್ನು ಕನಿಷ್ಟ 500 ರು.ಗೆ ಏರಿಸ ಬೇಕು ಎಂದು ಬೆಳೆಗಾರರ ಸಂಘದ ಅಧ್ಯಕ್ಷರು ಒತ್ತಾಯಿಸಿದ್ದಾರೆ.