ಮಹಿಳೆಯರಿಂದಲೇ ಪ್ರಪಂಚ ಜೀವಂತ: ಕೃಷ್ಣಸ್ವಾಮಿ
ಕ.ಪ್ರ ವಾರ್ತೆ ಹಾಸನ ಆ. 11
ಪ್ರಪಂಚ ಮಹಿಳೆಯರಿಂದಲೇ ಇನ್ನು ಜೀವಂತವಾಗಿದೆ ಎಂದು ರಾಮಕೃಷ್ಣ ವಿದ್ಯಾಲಯ(ಹೋಲಿಮದರ್) ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ಸಿ.ಎಸ್.ಕೃಷ್ಣಸ್ವಾಮಿ ಹೇಳಿದರು.
ನಗರದ ಕೆ.ಆರ್. ಪುರಂ ಬಳಿ ಇರುವ ರಾಮಕೃಷ್ಣ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಸಭಾಂಗಣದಲ್ಲಿ ಹೇಮಾವತಿ ಮಹಿಳಾ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ನಾನಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಗುವಿಗೆ ತಾಯಿಯ ಆಶ್ರಯ ಬಹು ಮುಖ್ಯ. ಹೆಣ್ಣು ಮ್ಕಳು ಶ್ರಮಿಸಿದಷ್ಟು ಪುರುಷರು ಶ್ರಮ ವಹಿಸುವುದಿಲ್ಲ ಎಂದ ಅವರು, ಪ್ರತಿ ಮನೆಯಲ್ಲೂ ಮಕ್ಕಳ ಬಗ್ಗೆ ಮಹಿಳೆಯರ ಪಾತ್ರ ಮುಖ್ಯವಾಗಿರುತ್ತದೆ. ಅವರ ತ್ಯಾಗವು ಬಹಳ ಇದೆ ಎಂದರು.
ಇದೇ ವೇಳೆ ನಾನಾ ಶಾಲೆಯಿಂದ ವೇಷ ಭೂಷಣ ಸ್ಪರ್ಧೆ ರಾಷ್ಟ್ರ ಧ್ವಜದ ಚಿತ್ರ ಬಿಡಿಸುವುದು, ದೇಶ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು. ಹೇಮಾವತಿ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಾಶರ್ಮಾ, ವಿದೂಷಿ ವಾಣಿಶ್ರೀ, ಶಾಲೆಯ ಉಪನ್ಯಾಸಕಿ ಶಾಂತ ಸಂಘದ ಸದಸ್ಯರು ಇತರರು ಭಾಗವಹಿಸಿದ್ದರು. ವಿಜಯಲಕ್ಷ್ಮಿ ಆಂಜನಪ್ಪ ನಿರೂಪಿಸಿದರು. ಪದ್ಮ, ರಾಜಶ್ರೀ, ಮಂಜುಳಾ ಪ್ರಾರ್ಥಿಸಿದರು. ಲೀಲಾವತಿ ಅವರು ಸ್ವಾಗತಿಸಿದರು.