ರಕ್ಷಿತಾರಣ್ಯದಲ್ಲಿ ಮಾರಣಹೋಮ: ಸಿಬ್ಬಂದಿ ಎತ್ತಂಗಡಿ
ಕ.ಪ್ರ. ವಾರ್ತೆ ಅರಸೀಕೆರೆ ಆ.11
ತಾಲೂಕಿನ ಭೈರಾಂಬುಧಿ, ಸಂಕೋಡನಹಳ್ಳಿ ನಡುವೆ ಇರುವ ರಕ್ಷಿತಾರಣ್ಯದಲ್ಲಿ ನಡೆದಿದ್ದ ಮರಗಳ ಮಾರಣಹೋಮಕ್ಕೆ ಸಂಬಂಧಿಸಿದಂತೆ ಕನ್ನಡಪ್ರಭದಲ್ಲಿ ಬಂದ ವರದಿಯಿಂದ ಎಚ್ಚೆತ್ತ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಸಂಬಂಧ ಅರಣ್ಯ ಇಲಾಖೆಯ ಇಬ್ಬರನ್ನು ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಇಲ್ಲಿಂದ ಎತ್ತಂಗಡಿ ಮಾಡಿದೆ.
ಜೂನ್ 19ರಂದು ಕನ್ನಡಪ್ರಭದಲ್ಲಿ ಪ್ರಕಟವಾದ ಕಾಡು ಬೆಳೆಸಲು, ಪರಿಸರ ಸಂರಕ್ಷಣೆ ಮಾಡಲು ಕೇಂದ್ರ ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರು. ವೆಚ್ಚ ಮಾಡುತ್ತಿದ್ದು ತಾಲೂಕಿನಲ್ಲಿ ಪರಿಸರ ನಾಶದಿಂದ ಇಂದು ಕಾಲಕಾಲಕ್ಕೆ ಮಳೆಯಾಗದೆ ತೀವ್ರ ಬರಗಾಲ ಎದುರಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇರುವಂಥ ಕಾಡಿನ ಮರಗಳನ್ನು ಸಂರಕ್ಷಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವ ಕಾರಣ ಲಕ್ಷಾಂತರ ರು. ಗಳ ಬೆಲೆ ಬಾಳುವ ಅಕೇಶಿಯಾ, ನೀಲಗಿರಿ ಸೇರಿದಂತೆ ಇನ್ನಿತರ ಮರಗಳು ನಿರಂತರವಾಗಿ ಕಳ್ಳಸಾಗಾಣಿಕೆದಾರರಿಗೆ ಬಲಿಯಾಗುತ್ತಿದ್ದರೂ ಸಂಬಂಧಿಸಿದ ವನಪಾಲಕರು ಅರಣ್ಯ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬರತೊಡಗಿವೆ ಎಂಬ ವರದಿ ಪ್ರಕಟವಾಗಿತ್ತು. ವರದಿಯಿಂದ ದಿಢೀರನೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅರಣ್ಯ ರಕ್ಷಣೆ ಮಾಡುವಲ್ಲಿ ವಿಫಲರಾದ ಇಬ್ಬರು ಸಿಬ್ಬಂದಿಗೆ ವರ್ಗಾವಣೆಯ ಶಾಕ್ ನೀಡಿದ್ದಾರೆ.
ಸಿಬ್ಬಂದಿ ನಾಗೇಶ್ ಅವರನ್ನು ಚನ್ನರಾಯಪಟ್ಟಣ ಹಾಗೂ ಅರಣ್ಯ ರಕ್ಷಕ ಮುಬಾರಕ್ ಅವರನ್ನು ಸಕಲೇಶಪುರದ ಬಿಸಿಲೆ ಅರಣ್ಯಕ್ಕೆ ವರ್ಗಾವಣೆ ಮಾಡಿರುವುದು, ಈ ಮೂಲಕ ಇನ್ನಿತರ ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆ ಬಾರಿಸಿದೆ.