ಲಯಬದ್ಧವಾಗಿ ಹಾಡಿದಾಗ ಗೀತೆ ಸ್ವಾದ ಸವಿಯಲು ಸಾಧ್ಯ
ಕ.ಪ್ರ. ವಾರ್ತೆ ಅರಸೀಕೆರೆ ಆ.11
ದೇಶದಲ್ಲಿ ಸಂಗೀತಕ್ಕೆ ತನ್ನದೇ ಆದ ಮಹತ್ವ ನೀಡಲಾಗಿದ್ದು, ನಾಡು ನುಡಿಗಾಗಿ ನಮ್ಮ ಕವಿಗಳು ರಚಿಸಿದ ಕವನ, ದೇಶ ಭಕ್ತಿ ಗೀತೆಗಳನ್ನು ಲಯಬದ್ಧವಾಗಿ ಹಾಡಲು ಕಲಿತಾಗ ಮಾತ್ರ ಅದರ ಸ್ವಾದ ಸವಿಯಲು ಸಾಧ್ಯ ಎಂದು ರೋಟರಿ ಅಧ್ಯಕ್ಷ ಪ್ರವೀಣಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಭವನದಲ್ಲಿ ಬೆಳ್ಳಿಮಂಡಲ ಜಿಲ್ಲಾ ಸಮಿತಿ, ಅರಸೀ ಸಾಂಸ್ಕೃತಿಕ ವೇದಿಕೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವಭಾರತಿ ಕನ್ನಡದಾರತಿ ಎಂಬ ನಾಡು ನುಡಿ ಗೀತೆಗಳ ತರಬೇತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನು ಗುಲಾಮಗಿರಿಯಿಂದ ಬಿಡುಗಡೆಗೊಳಿಸಲು ಅನೇಕ ಕವಿಗಳು ದೇಶ ಭಕ್ತಿ ಗೀತೆಗಳನ್ನು ರಚಿಸಿ ಜನತೆಯನ್ನು ಜಾಗೃತಗೊಳಿಸುವುದರ ಮೂಲಕ ತಮ್ಮದೇ ಸೇವೆಯನ್ನು ಸಲ್ಲಿಸಿದ್ದರು ಎಂದರು.
ಅಂದು ರಚಿಸಿದ ದೇಶ ಭಕ್ತಿ ಗೀತೆಗಳು ಇಂದಿಗೂ ನಮಗೆ ಸ್ಫೂರ್ತಿದಾಯಕವಾಗಿವೆ. ರಾಜ್ಯವೂ ಇದಕ್ಕೆ ಹೊರತಾಗಿರದೇ ಈ ನಾಡಿನ ಹಿರಿಮೆಯನ್ನು ಸಾರುವ ಕವನ ಮತ್ತು ಗೀತೆಗಳನ್ನು ನಮ್ಮ ಹಿರಿಯ ಕವಿಗಳು ರಚಿಸಿ ಕೊಡುಗೆಯಾಗಿ ನೀಡಿದ್ದಾರೆ. ಇಂತಹ ಮಹಾನ್ ಕವಿಗಳು ರಚಿಸಿರುವ ಗೀತೆಗಳನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಾಮೂಹಿಕವಾಗಿ ಈ ಶಿಬಿರದಲ್ಲಿ ಕಲಿಯುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಲ್ಲಿಗೆ ಸುಧೀರ್ ಮಾತನಾಡಿ, ಸಂಗೀತವು ವಯಸ್ಸಿನ ಭೇದ ಭಾವವಿಲ್ಲದೇ ಅವರವರ ಮನಸ್ಸಿಗೆ ತಂಪನ್ನು ನೀಡುವ ಸಾಧನವಾಗಿದೆ. ನಮ್ಮ ಪೂರ್ವಿಕರು ಸಂಗೀತದ ಬಗ್ಗೆ ಅಪಾರ ಪಾಂಡಿತ್ಯವನ್ನು ಹೊಂದಿದ್ದು, ಅವರು ಹಾಕಿಕೊಟ್ಟ ಮಾರ್ಗದರ್ಶನ ಸಂಗೀತ ಕಲಾಕಾರರಿಗೆ ದಾರಿ ದೀಪವಾಗಿದೆ.ಮಾನಸಿಕವಾಗಿ ಆಹ್ಲಾದ ನೀಡುವ ಸಂಗೀತವನ್ನು ಸೂಕ್ತ ಪರಿಕರಗಳು ಹಾಗೂ ರಾಗದೊಂದಿಗೆ ಸಂಯೋಜಿಸಿ ಹಾಡಿದಲ್ಲಿ ಅದರಲ್ಲಿ ಸಿಗಬಹುದಾದ ಆನಂದ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಈ ತರಬೇತಿ ಶಿಬಿರ ನಡೆಯುತ್ತಿದ್ದು, ಈ ಶಿಬಿರದಲ್ಲಿ ನಾನಾ ಶಾಲಾ ಕಾಲೇಜುಗಳ ಆಸಕ್ತ ಮಕ್ಕಳು 200 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸುಧೀರ್, ಬೆಳ್ಳಿಮಂಡಲ ಜಿಲ್ಲಾ ಅಧ್ಯಕ್ಷ ಜಾವಗಲ್ ಪ್ರಸನ್ನಕುಮಾರ್,ಅರಸೀ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹರೀಶ್ ಮಾತನಾಡಿದರು. ಕಾರ್ಯದರ್ಶಿ ಮಮತ, ಪದಾಧಿಕಾರಿಗಳಾದ ಡಿ.ಬಿ.ಕುಮಾರ್, ನೇತ್ರ, ಕಾಮೇಶ್ವರಿಭಟ್, ರೇಖಾಕುಮಾರ್, ವಿಷ್ಣುಭಟ್, ಶರತ್,ರವಿಶಂಕರ್, ಗಿರೀಶ್ ಇನ್ನೂ ಮೊದಲಾದವರು ಇದ್ದರು.