ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿಶ್ವವನ್ನು ಅಣ್ವಸ್ತ್ರ ದಾಳಿಯಿಂದ ಮುಕ್ತಗೊಳಿಸಿ

Mainashree
Updated On : 11 Aug 2013, 11:46 am

ಹಾಸನ: ಇತಿಹಾಸದ ಘಟನೆಯಿಂದ ಪಾಠ ಕಲಿತು ವಿಶ್ವವನ್ನು ಅಣ್ವಸ್ತ್ರ ದಾಳಿಯಿಂದ ಮುಕ್ತಗೊಳಿಸಿ, ಮಾನವ ಜನಾಂಗದ ಭವಿಷ್ಯವನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜಿನ  ಪ್ರಾಂಶುಪಾಲ ಎಂ. ಜಯೇಂದ್ರ ತಿಳಿಸಿದರು.
 ಮೊಸಳೆ ಹೊಸಹಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹಿರೋಷಿಮಾ ದಿನಾಚರಣೆಯಲ್ಲಿ ಮಾತನಾಡಿದ ಅವರು,  ಮನುಷ್ಯನ ಅಧಿಕಾರ ಲಾಲಸೆ ಹಾಗೂ ಸರ್ವಾಧಿಕಾರಿ ಮನೋಭಾವ ಹೇಗೆ ಸರ್ವನಾಶಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಹಿರೋಷಿಮಾ ಮತ್ತು ನಾಗಸಾಕಿ ಮೇಲಿನ ಅಣುಬಾಂಬ್ ದಾಳಿ ಒಂದು ಕ್ರೂರ ಉದಾಹರಣೆಯಾಗಿದೆ. ಇಂದಿಗೂ ಅದರ ಪರಿಣಾಮವನ್ನು ಮನುಷ್ಯ ಜನಾಂಗ ಎದುರಿಸುತ್ತಿದೆ ಎಂದು ಹೇಳಿದರು.
 ಮಾನವ ಇತಿಹಾಸದಲ್ಲಿ ಕರಾಳ ಘಟನೆಯಾದ ಅಣ್ವಸ್ತ್ರ ಪ್ರಯೋಗ ಇಂದಿನ ಯುವಜನಾಂಗಕ್ಕೆ ಸಿನಿಮೀಯ ದೃಶ್ಯಗಳಾಗಿ ಮಾತ್ರ ಕಾಣಿಸುತ್ತಿವೆ. ಇದು ಕೇವಲ ಚರಿತ್ರೆಯ ಪಾಠದ ವಿಷಯವಲ್ಲ.
 ಮನುಕುಲದ ಅಸ್ತಿತ್ವಕ್ಕೆ ಸವಾಲಾಗಿರುವ  ಅತ್ಯಂತ ಗಂಭೀರವಾದ ವಿಷಯ ವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ದೇಶ ಹಾಗೂ  ವಿಶ್ವದ ಬಗೆಗೆ ಪ್ರೀತಿಯನ್ನು ಬೆಳೆಸಿಕೊಂಡು ಹಿಂಸೆಗೆ  ತಿಲಾಂಜಲಿ ನೀಡಿ, ವಿಶ್ವಶಾಂತಿಗಾಗಿ ಕಂಕಣಬದ್ಧರಾಗಬೇಕೆಂದು ಕರೆ ನೀಡಿದರು.
 ಮುಖ್ಯ ಅತಿಥಿ ಕನ್ನಡ ಸಹ ಪ್ರಾಧ್ಯಾಪಕ  ಡಾ.ಡಿ.ಶ್ರೀನಿವಾಸ, ಕೇವಲ ಎರಡು ಅಣುಬಾಂಬ್ ಪ್ರಯೋಗದ ವಿನಾಶವನ್ನು ನಾವು ಇಂದಿಗೂ ಕಾಣುತ್ತಿದ್ದೇವೆ. ಆದರೆ ಅದಕ್ಕಿಂತ ಸಾವಿರದಷ್ಷು ಶಕ್ತಿಯುಳ್ಳ ಅಸಂಖ್ಯಾತ ಅಣುಬಾಂಬ್‌ಗಳನ್ನು ಅನೇಕ ದೇಶಗಳು ತಯಾರಿಸಿವೆ. ಅವುಗಳಿಂದ ಈ ಭೂಮಿಯನ್ನು ಕಾಪಾಡುವುದು ಬಹು ದೊಡ್ಡ ಸವಾಲಾಗಿದೆ.
 ಕಳಿಂಗ ಯುದ್ಧದಿಂದ ಸಾಮ್ರಾಟ್ ಅಶೋಕ ಎಚ್ಚರಗೊಂಡಂತೆ, ಹೀರೋಷಿಮಾ ಹಾಗೂ ನಾಗಸಾಕಿಯ ಮೇಲಿನ ಅಣ್ವಸ್ತ್ರ ಪ್ರಯೋಗದಿಂದ ಈ ಜಗತ್ತು ಎಚ್ಚರಗೊಳ್ಳಬೇಕಿದೆ. ಈ ಜಗತ್ತು ಇನ್ನೆಂದೂ ಅಣ್ವಸ್ತ್ರ ಪ್ರಯೋಗ ಕಾಣದಿರಲಿ. ಅದಕ್ಕಾಗಿ ಇಂದು ನಮ್ಮೆಲ್ಲರ ಮಂತ್ರ ಒಂದೇ. ಅದು ವಿಶ್ವಶಾಂತಿ ಎಂದು ಅಭಿಪ್ರಾಯಪಟ್ಟರು.
 ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ಪಿ.ಗೋಪಾಲ್ ಮಾತನಾಡಿ, ತನ್ನ ದುರಾಸೆ ಹಾಗೂ ಹಠಮಾರಿತನಗಳ ಸ್ವಯಂಕೃತಾಪರಾಧದಿಂದ ಸರ್ವನಾಶವನ್ನು ಅನುಭವಿಸಿದ ಜಪಾನ್ ದೇಶ ಇಂದು ಜಗತ್ತಿಗೆ ಶಾಂತಿ ಸಾರುವ ಬದ್ಧತೆಯೊಂದಿಗೆ ಹೆಜ್ಜೆ ಹಾಕುತ್ತಿದೆ. ಇದೇ ಸಂದರ್ಭದಲ್ಲಿ ವಿವಿಧ ದೇಶಗಳು ಅಣ್ವಸ್ತ್ರ ಪೈಪೋಟಿ  ನಡೆಸದೆ ಶಾಂತಿ ಬಯಸಿದಲ್ಲಿ ಮಾತ್ರ ಈ ವಿಶ್ವ ಮುಂದಿನ ಜನಾಂಗಕ್ಕಾಗಿ ಉಳಿಯುತ್ತದೆ. ಇಲ್ಲವಾದಲ್ಲಿ ಸರ್ವನಾಶ ಹೊಂದುತ್ತದೆ. ಈ ಸಂದರ್ಭದಲ್ಲಿ ನಾವೆಲ್ಲ ಕುವೆಂಪು ಹೇಳಿದ ವಿಶ್ವಮಾನವರಾಗಿ ಈ ಜಗತ್ತನ್ನು ಪ್ರೀತಿಸಿ ಉಳಿಸಬೇಕಿದೆ ಎಂದರು.
 ಅರ್ಥಶಾಸ್ತ್ರ ವಿಭಾಗದ ಎಂ. ಮಾದೇಗೌಡ, ಇಂಗ್ಲಿಷ್ ವಿಭಾಗದ ಬಿ.ಆರ್.ಜಯಸಿಂಹ, ಗ್ರಂಥಪಾಲಕ ಎನ್.ಮಂಜುನಾಥ್ ಮಾತನಾಡಿದರು. ಮೇಘನ ಮತ್ತು ತಂಡದವರು ಪ್ರಾರ್ಥಿಸಿದರು, ಉಪನ್ಯಾಸಕ ಹರಿಪ್ರಸಾದ್ ಸ್ವಾಗತಿಸಿದರು. ರಾಮಚಂದ್ರ ವಂದಿಸಿದರು, ಮಮತ ನಿರೂಪಿಸಿದರು.
 ಪ್ರಾರಂಭದಲ್ಲಿ ಎಲ್ಲರೂ ಮೇಣದ ಬತ್ತಿಯ ಬೆಳಕಿ ನೊಂದಿಗೆ ವಿಶ್ವಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದರು.  ಹಿರೋಷಿಮಾ ಹಾಗೂ ನಾಗಸಾಕಿ ಪಟ್ಟಣಗಳ ಮೇಲೆ ಅಣುಬಾಂಬ್ ಹಾಕಿದ ಸಂದರ್ಭ ಹಾಗೂ ಅದರ ಪರಿಣಾಮಗಳ ಕುರಿತಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement