ಸಮಗ್ರ ಕೃಷಿ ಪದ್ಧತಿ ಉತ್ತಮ: ಡಾ.ಗಿರೀಶ್
ಹಾಸನ: ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ ಗಿರೀಶ್ ಸಲಹೆ ನೀಡಿದರು. ಹಾಸನ ಕೃಷಿ ವಿಜ್ಞಾನ ಕೇಂದ್ರದಿಂದ ಚನ್ನರಾಯಪಟ್ಟಣ ತಾಲೂಕಿನ ಗ್ಯಾರಳ್ಳಿ ಗ್ರಾಮದ ರೈತರಿಗೆ ಏರ್ಪಡಿಸಿದ್ದ ಸಮಗ್ರ ಕೃಷಿಯಲ್ಲಿ ಜೈವಿಕ ಇಂಧನ ಸಸಿಗಳ ಅಳವಡಿಕೆ ಬಗೆಗಿನ ತರಬೇತಿ ಉದ್ಘಾಟಿಸಿ ಮಾತನಾಡಿದರು.
ರೈತರು ನಾನಾ ಬೆಳೆಗಳಲ್ಲಿ ಹೊಸ ತಳಿಗಳನ್ನು ಬಳಕೆ ಮಾಡುವುದರ ಜೊತೆಗೆ ಕೃಷಿಯಲ್ಲಿ ಜೈವಿಕ ಇಂಧನ ಸಸಿಗಳಾದ ಕಸಿ ಮಾಡಿದ ಹೊಂಗೆ, ಬೇವು, ಹಿಪ್ಪೆ ಹಾಗೂ ಸಿಮರೂಬ, ಜತ್ರೋಪ ಸಸಿಗಳನ್ನು ಬದುಗಳಲ್ಲಿ, ಬಂಜರು ಭೂಮಿಯಲ್ಲಿ ಹಾಗೂ ರಸ್ತೆ ಬದುಗಳಲ್ಲಿ ನೆಟ್ಟು ಹೆಚ್ಚಿನ ಆದಾಯ ಪಡೆಯಲು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾಮದ ಪ್ರಗತಿಪರ ರೈತ ವೀರೇಶ್, ಹನುಮಂತೇಗೌಡ, ರೈತ ಮಹಿಳೆಯರು, ಕ್ಷೇತ್ರ ಸಹಾಯಕ ತಿರುಮಲ್ಲೇಶ್, ವೇಣು ಕರಡೇವು ಮಂಜುನಾಥ ಇದ್ದರು.