15ಕ್ಕೆ ಗೀತಗಾಯನ ಕಾರ್ಯಕ್ರಮ
ಅರಸೀಕೆರೆ: ಜಿಲ್ಲಾ ಬೆಳ್ಳಿಮಂಡಲ ಸಮಿತಿ ಹಾಗೂ ಅರಸೀ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ.15 ರಂದು ನಾಡಿನ ಖ್ಯಾತ ಹಿರಿಯ ಕವಿಗಳ ನೆನಪಿಗಾಗಿ ವಿಶ್ವ ವಿನೂತನ ವಿದ್ಯಾ ಚೇತನ ನಾಡು ನುಡಿ ಗೀತಗಾಯನ ಕಾರ್ಯಕ್ರಮ ಅಯೋಜಿಸಲಾಗಿದೆ ಎಂದು ಜಿಲ್ಲಾ ಬೆಳ್ಳಿಮಂಡಲ ಸಮಿತಿ ಅಧ್ಯಕ್ಷ ಜಾವಗಲ್ ವಸಂತಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮ ಅಯೋಜಿಸಿದ್ದು, ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಂಜೆ ಐದು ಗಂಟೆಗೆ ಈ ವಿಶೇಷವಾದ ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಆಸಕ್ತ ಮಕ್ಕಳಿಗೆ ತರಬೇತಿ: ಕಾರ್ಯಕ್ರಮಕ್ಕೆ ಪೂರ್ವ ಭಾವಿಯಾಗಿ ಆಸಕ್ತ ಮಕ್ಕಳಿಗೆ ಗಾಯನ ತರಬೇತಿ ನೀಡಲಾಗುತ್ತಿದ್ದು, ಇವರಿಗೆ ನಾಡಿನ ಜನಪ್ರಿಯ ಗಾಯಕರ ಜತೆಯಲ್ಲಿ ಸಮೂಹ ಗಾಯನ ತರಬೇತಿಯನ್ನು ನೀಡಲಾಗುವುದು. ಈ ಪೂರ್ವಭಾವಿ ತರಬೇತಿಯು ಆ.9 ಮತ್ತು 10 ರಂದು 2 ದಿನಗಳ ಕಾಲ ನಡೆಯಲಿದ್ದು, ಗಾಯಕ ಮತ್ತು ರಾಗ ಸಂಯೋಜಕರಾದ ಎಂ.ಎಸ್. ಸುಧೀರ್ ಮತ್ತು ಮಲ್ಲಿಗೆ ಸುಧೀರ್ ಇವರು ನಾಡು-ನುಡಿ ಗೀತೆಗಳ ತರಬೇತಿ ಶಿಬಿರವನ್ನು ನಡೆಸಿಕೊಳ್ಳಲಿದ್ದಾರೆ. ಈ ಶಿಬಿರದಲ್ಲಿ ಸೇರ ಬಯಸುವ ಆಸಕ್ತ ಮಕ್ಕಳು ಜಾವಗಲ್ ಪ್ರಸನ್ನಕುಮಾರ್ -9964548264, ಮಮತಾ- 9164989950, ಬಿ.ಪರಮೇಶ- 9448868212 ಇವರನ್ನು ಸಂಪರ್ಕಿಸಿ.
ಜೂಜುಕೋರರ ಬಂಧನ
ಅರಸೀಕೆರೆ: ತಾಲೂಕಿನ ಕಾರೆಹಳ್ಳಿಹಟ್ಟಿ ಗ್ರಾಮದ ಹತ್ತಿರ ರಸೂಲ್ಸಾಬ್ ಎಂಬುವರ ಬಾಳೆ ತೋಟದಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ 6 ಮಂದಿ ಜೂಜುಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಮಟನ್ ಮಾರ್ಕೆಟ್ನಿವಾಸಿ ಫಯಾಜ್ಖಾನ್ ರಜಾಕ್ (32), ಸಂತೆಪೇಟೆ ವಾಸಿ ಮಹಮದ್ ಅಕ್ಬರ್ (32), ಖಲಂದರ್ (32), ರಿಜ್ವಾನ್ (34), ಸುನ್ನಿಚೌಕದ ವಾಸಿ ತನ್ವೀರ್ (30), ಹಳೆಮಂಡಿ ರಸ್ತೆಯ ವಾಸಿ ರಿಜ್ವಾನ್ (28) ಬಂಧಿತ ಆರೋಪಿಗಳು. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ರು. 49,200 ನಗದನ್ನು ವಶಪಡಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಸಂಬಂಧ ಕ್ರಮ ಕೈಗೊಂಡಿದ್ದಾರೆ.
ಯುವತಿ ನಾಪತ್ತೆ
ಹೊಳೆನರಸೀಪುರ: ತಾಲೂಕಿನ ನೇರಲೆ ಗ್ರಾಮದ ಮೂರ್ತಿ ಎಂಬುವರ ಪುತ್ರಿ ಅರ್ಪಿತಾ (20) ಗೊರೂರು ಡ್ಯಾಂ ನೋಡಿಕೊಂಡು ಬರುವುದಾಗಿ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಇತ್ತೀಚೆಗೆ ನಡೆದಿದೆ. 5.2 ಅಡಿ ಎತ್ತರ, ಕನ್ನಡ ಮಾತನಾಡುತ್ತಾರೆ ಎಂದು ಆಕೆಯ ತಂದೆ ಮೂರ್ತಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.