ಉಪನ್ಯಾಸಕರ ಅಮಾನತು ಖಂಡಿಸಿ ಪ್ರತಿಭಟನೆ
ಹಾಸನ: ವಿನಾ ಕಾರಣ ಉಪನ್ಯಾಸಕರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಸೋಮವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾಕಾರರು ಎನ್.ಆರ್.ವೃತ್ತ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡರು ಮಾತನಾಡಿ, ಚನ್ನರಾಯಪಟ್ಟಣದ ನವೋದಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಿ.ಆರ್. ಗೋಪಾಲಕೃಷ್ಣ ಅವರನ್ನು ಕಾರಣವಿಲ್ಲದೆ, ಅಮಾನತುಗೊಳಿಸಿರುವ ಆಡಳಿತ ಮಂಡಳಿಯನ್ನು ಈ ಕೂಡಲೇ ಬದಲಾಯಿಸುವಂತೆ ಒತ್ತಾಯಿಸಿದರು.
ಜಿಲ್ಲಾಡಳಿತಕ್ಕೆ ಮನವಿ: ಅಮಾನತುಗೊಳಿಸಿರುವ ಉಪನ್ಯಾಸಕರನ್ನು ಮರು ನೇಮಕಾತಿ ಮಾಡಿಕೊಳ್ಳಬೇಕೆಂದು ಮತ್ತು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿರುವ ಆಡಳಿತ ಮಂಡಳಿ ಬದಲಾಯಿಸಬೇಕೆಂದು ಆಗ್ರಹಿಸಿ ಇದೆ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಎಬಿವಿಪಿಯ ಎಸ್. ಗೌತಮ್, ಅಮಿತ್, ಯೋಗಾ ನರಸಿಂಹ, ಗಂಗಾಧರ್, ಕೇಶವ ಸೇರಿದಂತೆ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.