'ಪರಿಶ್ರಮದಿಂದ ಗುರಿಮುಟ್ಟಲು ಸಾಧ್ಯ'
ಮೈಸೂರು: ಪ್ರಾಮಾಣಿಕತೆ ಮತ್ತು ಪರಿಶ್ರಮಗಳಿಂದ ಗುರಿ ಮುಟ್ಟಲು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ನೀ. ಗಿರಿಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಇತ್ತೀಚೆಗೆ ನಗರದ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಬಾಲಕಿಯರ ಪ್ರೌಢಶಾಲೆಯಲ್ಲಿ ಅನುಭವ ಟ್ಯುಟೋರಿಯಲ್ಸ್, ವೆಂಕಟಗಿರಿ ಚಾರಿಟಬಲ್ ಟ್ರಸ್ಟ್, ಹಿರಣ್ಮಯಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿದ್ದ ಸಾಹಿತ್ಯ, ಸಂಸ್ಕೃತಿ ಪ್ರತಿಭಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂಕ ಗಳಿಕೆಯೇ ಶಿಕ್ಷಣದ ಗುರಿಯಲ್ಲ. ಶಿಕ್ಷಣ ಎಂದರೆ ಬದುಕಿನ ಪರಿವರ್ತನೆ. ಇಂಗ್ಲಿಷ್ ಭಾಷೆಯೂ ಸೇರಿದಂತೆ ಎಲ್ಲ ಭಾಷೆಗಳ ಒಳ್ಳೆಯ ಅಂಕಗಳನ್ನು ಕಲಿಯಬೇಕಾದ ಹಾಗೂ ಪಠ್ಯ ಚಟುವಟಿಕೆಗಳ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡು ಆದರ್ಶ ವ್ಯಕ್ತಿಗಳ ಬಗ್ಗೆ ತಿಳಿಯಬೇಕಾದ ಹಾಗೂ ಅವರ ಆದರ್ಶಗಳನ್ನು ಅನುಸರಿಸಬೇಕಾದ ಅಗತ್ಯಗಳ ಬಗ್ಗೆ ಒತ್ತಿ ಹೇಳಿದರು.ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎಂ.ಆರ್. ಸುಶ್ಮಿತಾ, ಆರ್. ಮೇಘವರ್ಷಿಣಿ ಮತ್ತಿತರರನ್ನು ಸನ್ಮಾನಿಸಲಾಯಿತು.