ಬೆಳೆ ಪರಿಹಾರ ನೀಡಲು ಆಗ್ರಹಿಸಿ ರೈತರ ಧರಣಿ
ಹಾಸನ: ಹಾನಿಗೊಳಗಾಗಿರುವ ಬೆಳೆಗಳಿಗೆ ಶೀಘ್ರವೇ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾಕಾರರು, ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿ, ಮನವಿ ಪತ್ರ ಸಲ್ಲಿಸಿದರು.
ರೈತರ ವಿಮೆ ಕೊಡಿಸಬೇಕು: ಈ ಸಂದರ್ಭದಲ್ಲಿ ರೈತ ಮುಖಂಡರು ಮಾತನಾಡಿ, ಜಿಲ್ಲೆಯ ಪ್ರಮುಖ ಬೆಳೆಯಾದ ಆಲೂಗೆಡ್ಡೆಗೆ ಅಂಗಮಾರಿ ರೋಗ ತಗಲಿ ಅತಿವೃಷ್ಟಿಯಿಂದ ಬೆಳೆಗಳೆಲ್ಲಾ ಸಂಪೂರ್ಣ ನಷ್ಟವಾಗಿದೆ. ಹಾಗೂ ತೆಂಗಿನ ಮರಗಳಿಗೂ ರೋಗ ಬಂದು ಮರಗಳು ನಾಶವಾಗಿವೆ. ರೈತರ ಬೆಳೆ ಪರಿಶೀಲಿಸಿ ಪರಿಹಾರ ನೀಡಲು ಮುಂದಾಗುವಂತೆ ಒತ್ತಾಯಿಸಿದರು.
2007 ರಿಂದ 2009ರ ಸಾಲಿನ ರೈತರ ವಿಮೆ ಕೊಡಿಸಬೇಕು. ಜಿಲ್ಲೆಯ ಎಲ್ಲಾ ಕೆರೆಗಳಿಗೂ ಜನ ಜಾನುವಾರುಗಳು ನೀರಿಲ್ಲದೆ ಪರದಾಡುತ್ತಿದ್ದು, ಎಲ್ಲಾ ಕೆರೆಗಳಿಗೂ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.
ಪಡಿತರ ತಾರತಮ್ಯ ಸರಿಪಡಿಸಿ: ಪಡಿತರ ಚೀಟಿಯ ತಾರತಮ್ಯ ಸರಿಪಡಿಸಲು ಮುಂದಾಗಬೇಕು. ಬೆಳೆಯಿಂದ ನಷ್ಟವಾಗಿರುವ ರೈತರ ಸಾಲವನ್ನು ಈ ಕೂಡಲೇ ಮನ್ನಾ ಮಾಡುವಂತೆ ಒತ್ತಾಯಿಸಿದರು. ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನವರ ಸಿದ್ದಪ್ಪ, ಉಪಾಧ್ಯಕ್ಷ ಮೂಲೆಹೊಳೆ ವಿಜಯಕುಮಾರ್, ಕಾರ್ಯದರ್ಶಿ ಅನೆಕೆರೆ ರವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೋರನಕೊಪ್ಪಲು ಜಯರಾಂ, ಕೊಟ್ಟೂರು ಶ್ರೀನಿವಾಸ್ ಇತರರು ಇದ್ದರು.