ಗೊರೂರು ಡ್ಯಾಂ ನೋಡಲು ಹೋದ ಯುವತಿ ಕಣ್ಮರೆ
ಕ.ಪ್ರ.ವಾರ್ತೆ ಹೊಳೆನರಸೀಪುರ ಆ. 13
ಭಾವಿ ಪತಿಯೊಂದಿಗೆ ಹೇಮಾವತಿ ಡ್ಯಾಂ ನೋಡಿಕೊಂಡು ಬರುವುದಾಗಿ ಹೇಳಿ ಹೋದ ಯುವತಿ ಎಂ.ಅರ್ಪಿತ (20) ಏಕಾಏಕಿ ಕಣ್ಮರೆ ಆಗಿರುವ ಘಟನೆ ತಾಲೂಕಿನ ನೇರಳೆ ಗ್ರಾಮದಲ್ಲಿ ನಡೆದಿದೆ.
ಆ. 6 ರಂದು ಬೆಳಗ್ಗೆ ಅರ್ಪಿತ ಭಾವಿ ಪತಿ ಶಿವಮೂರ್ತಿಯೊಂದಿಗೆ ಗೊರೂರಿನ ಹೇಮಾವತಿ ಅಣೆಕಟ್ಟೆ ನೋಡಲು ಹೋಗಿ ಬರುವುದಾಗಿ ಹೇಳಿ ಹೋದವಳು ಸಂಜೆಯಾದರೂ ಮನೆಗೆ ಹಿಂತಿರುಗಿಲ್ಲ.
ಆತಂಕಗೊಂಡ ಆಕೆಯ ತಂದೆ ತಾಯಿ ಭಾವಿ ಅಳಿಯ ಶಿವಮೂರ್ತಿಗೆ ದೂರವಾಣಿಯಲ್ಲಿ ಮಾತನಾಡಿದಾಗ ಆಕೆ ತನ್ನೊಂದಿಗೆ ಬಂದಿಲ್ಲ. ಜತೆಗೆ ತಾನು ಗೊರೂರಿಗಾಗಲಿ ಮತ್ತೇಲ್ಲಿಗೂ ಹೋಗಿಯೇ ಇಲ್ಲ ಎಂದು ತಿಳಿಸಿದ್ದಾನೆ.
ಜತೆಗೆ ತಾನು ಸಹ ಅರ್ಪಿತಾಗೆ ಮೊಬೈಲ್ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದೆ, ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಹೇಳಿದ್ದಾರೆ. ಈ ಮಾಹಿತಿಯಿಂದ ಆಕೆಯ ಕುಟುಂಬ ವರ್ಗದವರು ನೆಂಟರಿಷ್ಟರ ಮನೆಗಳಲ್ಲಿ ವಿಚಾರಿಸಿದ್ದಾರೆ. ಆದರೆ ಏನೂ ಪ್ರಯೋಜನ ಕಂಡಿಲ್ಲ. ಅರ್ಪಿತಾ ತಂದೆ ಈ ಸಂಬಂಧ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಅರ್ಪಿತಾ ಬಿಬಿಎಂ ವ್ಯಾಸಂಗ ಮಾಡಿದ್ದು, ಮನೆ ಬಿಡುವಾಗ ಆಕೆ ಆಕಾಶ ನೀಲಿ ಬಣ್ಣದ ಚೂಡಿದಾರ್ ಧರಿಸಿದ್ದಳು ಎಂದು ಪೋಲಿಸರು ತಿಳಿಸಿದ್ದು, ಈಕೆಯನ್ನು ಕಂಡವರು ಹತ್ತಿರದ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.