ಡಿಸಿ ಕಚೇರಿ ಎದುರು ವಿದ್ಯಾರ್ಥಿಗಳ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ಆ. 13
ಕೇಂದ್ರ ಸರ್ಕಾರದ ವ್ಯಾಪಕ ಭ್ರಷ್ಟಾಚಾರ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕೆಲ ಸಮಯ ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ನೀಡಿದ ರು.
ಕೇಂದ್ರ ಯುಪಿಎ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಕೇಂದ್ರ ಸರ್ಕಾರದ, ಜನವಿರೋಧಿ ಹಾಗೂ ತುಷ್ಟೀಕರಣ ನೀತಿಯ ವಿರುದ್ಧ ಜಾಗೃತಿ ಅನಿರ್ವಾಯವಾಗಿದೆ. ಆಂತರಿಕ ಸುರಕ್ಷೆ ಮತ್ತು ಬಾಹ್ಯ ಸುರಕ್ಷೆಗಾಗಿ ಧ್ವನಿ ಎತ್ತುವ ಅವಶ್ಯಕವಿದೆ. ಕೇಂದ್ರ ಯುಪಿಎ ಸರ್ಕಾರ ಈ ಹಿಂದೆ ಎಂದೂ ಕಂಡರಿಯದಂತಹ ಲಕ್ಷಾಂತರ ಕೋಟಿ ರು.ಗಳ ಅವ್ಯವಹಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುಪಿಎ ಸರ್ಕಾರ ಹಲವಾರು ಹಗರಣಗಳ ಮೂಲಕ ಸುಮಾರು 12 ಲಕ್ಷ ಕೋಟಿ ರು.ಗೂ ಮೀರಿ ಭ್ರಷ್ಟಾಚಾರ ನಡೆಸಿದೆ. ಈ ಭ್ರಷ್ಟಾಚಾರದಲ್ಲಿ ಕೇಂದ್ರ ಸರ್ಕಾರದ ಹಲವು ಸಚಿವರು ಭಾಗಿಯಾಗಿರುವುದು ಸಾಬೀತಾಗಿದೆ. ಜೊತೆಗೆ ಕೇಂದ್ರ ಸರ್ಕಾರ ಹಣ ದುಬ್ಬರ ಮತ್ತು ಬೆಲೆ ಏರಿಕೆಯನ್ನು ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಜನರ ಸಮಸ್ಯೆ, ಕಷ್ಟ ಸುಖ ಅರಿತು ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರದೆ ತನ್ನ ಸ್ವಾರ್ಥಕ್ಕಾಗಿ ಬೆಲೆ ಏರಿಕೆ ಮಾಡುವ ಮೂಲಕ ಜನ ಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ಹೊರೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ದಿನದಿನಕ್ಕೆ ರುಪಾಯಿ ಮೌಲ್ಯ ಕುಸಿತ: ರುಪಾಯಿ ಮೌಲ್ಯ ದಿನದಿನಕ್ಕೆ ಕುಸಿತ ಕಾಣುತ್ತಿದೆ. ಸರ್ಕಾರ ವಿದೇಶಿ ನೀತಿ ರೂಪಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಾಗಿ ಯುವ ಜನತೆ ಹಾಗೂ ವಿದ್ಯಾರ್ಥಿಗಳ ಸಹಯೋಗದೊಂದಿಗೆ ರಾಷ್ಟ್ರವ್ಯಾಪ್ತಿ ಆಂದೋಲನ ನಡೆಸುವ ಅವಶ್ಯಕತೆ ಇದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿನ ವ್ಯಾಪಾರೀಕರಣ, ಭ್ರಷ್ಟಾಚಾರ ಮತ್ತು ಅರಾಜಕತೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ. ವಿದೇಶಗಳಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರಲು ಕಾನೂನು ರೂಪಿಸಲು ಮತ್ತು ಭ್ರಷ್ಟಾಚಾರಿಗಳ ಹೆಸರು ಬಹಿರಂಗಗೊಳಿಸುವ ಬೇಡಿಕೆಯನ್ನು ನಿರಂತರವಾಗಿ ಯುಪಿಎ ಸರ್ಕಾರದ ಮುಂದೆ ಸಲ್ಲಿಸುತ್ತಿದ್ದರೂ. ಈ ಬೇಡಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಕೇಂದ್ರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಹೆಸರನ್ನು ಬಹಿರಂಗಗೊಳಿಸಿದರೆ ತಮ್ಮ ಪಕ್ಷದ ನಾಯಕರ ಹೆಸರು ಎಲ್ಲಿ ಬಹಿರಂಗವಾಗುತ್ತದೋ ಎಂಬ ಭಯ ಯುಪಿಎ ಸರ್ಕಾರಕ್ಕೆ ಕಾಡುತ್ತಿದೆ ಎಂದು ಕಿಡಿಕಾರಿದರು.
ದೇಶದ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು. ನ್ಯಾಯಾಂಗದಲ್ಲಿ, ಚುನಾವಣೆ ಪದ್ಧತಿಯಲ್ಲಿ, ಆಡಳಿತ, ಪೊಲೀಸ್ ವ್ಯವಸ್ಥೆಯಲ್ಲಿ ಜೊತೆಗೆ ಶಿಕ್ಷಣ ವ್ಯವಸ್ಥೆಯಲ್ಲೂ ಸುಧಾರಣೆಯನ್ನು ತರಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಇದರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನಗರ ಕಾರ್ಯದರ್ಶಿ ಎಸ್.ಗೌತಮ್, ಬಿ.ಎಸ್.ಅರುಣಕುಮಾರ್, ಗಂಗಾಧರ್, ಲೋಕೇಶ್, ಚಿನ್ಮಯ್, ರೋಹಿತ್, ಯತೀಶ್ಕುಮಾರ್, ಸುಜಯ್, ಕೇಶವ್, ಮಂಜುನಾಥ್, ಮೋಹನ್, ಪ್ರವ್ಣಿಕುಮಾರ್, ಪುನೀತ್, ರಾಜು, ಕಿರಣ್, ಪವನ್ಕುಮಾರ್, ಆನಂದ್, ಯತೀಶ್, ಪಲ್ಲವಿ, ಸುಮ, ಕಾವ್ಯ, ಸೌಮ್ಯ, ರೋಹಿಣಿ, ಪೂರ್ಣಿಮಾ, ಪಂಕಜ, ರಶ್ಮಿ, ಶೃತಿ, ಸ್ವಾಮಿ, ಸುಹಾಸಿನಿ, ಮಂಜುಳ ಇತರರು ಇದ್ದರು.