ಮಹಿಳೆ ವಿದ್ಯಾವಂತಳಾಗಿದ್ದರೂ ದೌರ್ಜನ್ಯ ತಪ್ಪಿಲ್ಲ
ಕ.ಪ್ರ.ವಾರ್ತೆ ಹಾಸನ ಆ. 13
ಸಮಾಜದಲ್ಲಿ ವಿದ್ಯಾವಂತರ ಅದರಲ್ಲೂ ಮಹಿಳಾ ವಿದ್ಯಾವಂತರ ಸಂಖ್ಯೆ ಹೆಚ್ಚಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ನಡೆಯುತ್ತಲೇ ಇದೆ ಎಂದು ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಜೆ.ಕೆ. ರಶ್ಮಿ ವಿಷಾದಿಸಿದರು.
ನಗರದ ಎ.ವಿ.ಕಾಂತಮ್ಮ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಸಾಮಾಜಿಕ ಅರಿವು ಮೂಡಿಸುವ ಸಂಬಂಧ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ರೀತಿಯ ಸ್ವಾತಂತ್ರ್ಯಗಳ ನಡುವೆಯೂ ಹೆಣ್ಣುಮಕ್ಕಳು ತಮ್ಮ ಮಿತಿ ಮೀರಿ ವರ್ತಿಸಬಾರದು. ತಮ್ಮ ಹಕ್ಕು ಗಳನ್ನು ಕೇಳಿದಂತೆಯೇ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಪುರುಷರಿಗಿಂತ ಸಮಾಜದಲ್ಲಿ ಮಹಿಳೆಯರ ಜವಾಬ್ದಾರಿ ಹೆಚ್ಚಾಗಿದೆ. ಕುಟುಂಬ ಮತ್ತು ಸಮಾಜವನ್ನು ತಿದ್ದಲು ಮಹಿಳೆಯರು ಪ್ರಾಮಾಣಿಕ ವಾಗಿ ಶ್ರಮಿಸಬೇಕು ಎಂದು ಹೇಳಿದರು.
ಅಪರಿಚಿತರೊಂದಿಗೆ ನಿಮ್ಮ ಬಾಂಧವ್ಯವನ್ನು ಬೆಳೆಸಿಕೊಳ್ಳುವಾಗ ಜಾಗೃತರಾಗಿರಬೇಕು. ಬದುಕಿನಲ್ಲಿ ಏನೇ ಸಮಸ್ಯೆಗಳು ಬಂದರೂ ಧೈರ್ಯವಾಗಿ ಎದುರಿಸುವಂತಹ ನಿರ್ಧಾರ ತೆಗೆದುಕೊಳ್ಳಬೇಕೆ ವಿನಹ ಆತ್ಮಹತ್ಯೆಯಂತಹ ಅಡ್ಡದಾರಿ ಹಿಡಿಯಬಾರದು. ಉದ್ಯೋಗದಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ತೊಡಗಿಸಿಕೊಂಡು ಸ್ವಾವಲಂಬಿ ಬದುಕು ನಡೆಸಿ ಆರ್ಥಿಕವಾಗಿ ಸಬಲರಾಗಿ ಸಮಾಜದ ಸ್ವಾಸ್ತ್ಯ ಕಾಪಾಡಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಎಸ್ಐ ಭಾನು ವಿದ್ಯಾರ್ಥಿನಿಯರಿಗೆ ಸಂಚಾರ ನಿಯಮ ಹೇಗೆ ಪಾಲಿಸ ಬೇಕೆಂಬುದರ ಬಗ್ಗೆ ಅರಿವು ಮೂಡಿಸಿದರು. ಕಾಲೇಜಿನ ಪಾಂಶುಪಾಲರಾದ ಎನ್.ಎಸ್.ಶಶಿಕಲಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿ.ಎನ್.ಯೋಗೀಶ್ವರ್ ಸ್ವಾಗತಿಸಿದರು. ಪ್ರಕಾಶ್ ವಂದಿಸಿದರು. ಎಸ್.ರೂಪ, ಆರ್.ಚೇತನಾ ನಿರೂಪಿಸಿದರು.