ಯೋಜನೆ ಫಲಾನುಭವಿಗಳ ಆಯ್ಕೆ ಕಠಿಣ: ಶಾಸಕ ಕುಮಾರಸ್ವಾಮಿ
ಸಕಲೇಶಪುರ: ಸರ್ಕಾರದ ಅವೈಜ್ಞಾನಿಕ ಕ್ರಮದಿಂದಾಗಿ ಬಸವ ವಸತಿ ಹಾಗೂ ಇಂದಿರಾ ಆವಾಜ್ ಯೋಜನೆಯ ಫಲಾನುಭವಿಗಳ ಆಯ್ಕೆ ಕಠಿಣವಾಗಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ವಸತಿಹೀನರಿಗೆ ಮನೆಗಳನ್ನು ನೀಡಲು ಸರಕಾರ ಉದ್ದೇಶಿಸಿದ್ದು ಪ್ರತಿ ಗ್ರಾಮ ಪಂಚಾಯ್ತಿಗೆ ಗರಿಷ್ಠ 20 ಮನೆಗಳನ್ನು ನೀಡಲು ಉದ್ದೇಶಿಸಿದೆ. ಆದರೆ ಸರಕಾರದ ನಿಯಮದಂತೆ ವಸತಿ ಹೀನರು ಮನೆಗಳನ್ನು ಪಡೆಯಲು ಪಹಣಿ ಪತ್ರ ತರಬೇಕು ಎಂಬ ನಿಯಮ ಜಾರಿ ಮಾಡಿರುವುದು ವಸತಿಹೀನರು ಮನೆ ಪಡೆಯಲು ಕಷ್ಟವಾಗಿದೆ ಎಂದು ಹೇಳಿದರು. ಭೂಹೀನರು ಪಹಣಿ ಪತ್ರ ತರುವುದು ಸಾಧ್ಯವಿಲ್ಲ. ಇದರಿಂದಾಗಿ ಕಡುಬಡವರಿಗೆ ಮನೆಗಳನ್ನು ನೀಡಬೇಕು ಎಂಬ ಸರಕಾರದ ಉದ್ದೇಶವೇ ಈಡೇರದಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಇಂತಹ ಅವೈಜ್ಞಾನಿಕ ಕ್ರಮದಿಂದ ಹಿಂದೆ ಸರಿಯಬೇಕು ಎಂದರು. ಅತಿವೃಷ್ಟಿಯಿಂದ ಹಾನಿಗೀಡಾಗಿರುವ ರಸ್ತೆ, ಜಮೀನುಗಳ ದುರಸ್ತಿ ಕಾರ್ಯವನ್ನು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಲು ನಿರ್ಣಯಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಇಓ ಸಿದ್ದರಾಜು ಇದ್ದರು.