ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಸ್ತೆ ಕಾಮಗಾರಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

Rashmi Kasaragodu
Updated On : 14 Aug 2013, 12:06 pm

ಕ.ಪ್ರ.ವಾರ್ತೆ    ಆಲೂರು    ಆ. 13
ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಬಿಕ್ಕೋಡು ರಸ್ತೆಯ ಗುಡ್ಡೇನಹಳ್ಳಿ ಬಳಿ ಗ್ರಾಮಸ್ಥರು ಮಂಗಳವಾರ ರಸ್ತೆ ತಡೆ ಕೈಕೊಂಡು ಪ್ರತಿಭಟನೆ ನಡೆಸಿದರು.
ಗುಡ್ಡೇನಹಳ್ಳಿ ಬಳಿ ಮಂಗಳವಾರ ಬೆಳಗ್ಗೆ ಮರ ತುಂಬಿದ್ದ ಟ್ರ್ಯಾಕ್ಟರ್ ಅಪೂರ್ಣಗೊಂಡಿರುವ ಮೋರಿ ಸೇತುವೆ ನಿರ್ಮಿಸಲು ವಾಹನ ಸಂಚಾರಕ್ಕಾಗಿ ಪರ್ಯಾಯವಾಗಿ ನಿರ್ಮಿಸಿದ್ದ ಮಣ್ಣಿನ ರಸ್ತೆಯಲ್ಲಿ ಟ್ರ್ಯಾಕ್ಟರ್ ಉರುಳಿ ಬಿದ್ದು, ಸೋಮವಾರದಿಂದಲೇ ರಸ್ತೆ ಸಂಚಾರ ಬಂದ್ ಆಗಿತ್ತು.
ಇದರಿಂದ ರೊಚ್ಚಿಗೆದ್ದ ಸುತ್ತಮುತ್ತಲಿನ ಗ್ರಾಮಸ್ಥರು ಕಣತೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ನಟರಾಜ್ನಕಲಗೂಡು ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಸ್ಥಳದಲ್ಲಿ ಜಮಾಯಿಸಿದ್ದ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ರಸ್ತೆ ತಡೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ನಟರಾಜ್ ನಕಲಗೂಡು ಮಾತನಾಡಿ, ಅಪೂರ್ಣಗೊಂಡಿರುವ ರಸ್ತೆ ಹಾಗೂ ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿದ್ದರೂ ಅಧಿಕಾರಿಗಳು ಇತ್ತ ಗಮನ ಹರಿಸದೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ.
ಇವರ ನಿರ್ಲಕ್ಷ್ಯ ದೋರಣೆಯಿಂದಾಗಿ ಸಾವಿರಾರು ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲಾಗದೆ ಗೈರುಹಾಜರಾಗುವಂತಾಗಿದ್ದು, ನೌಕರರು ಸೇರಿದಂತೆ ಇತರೆ ಪ್ರಯಾಣಿಕರು ಸೇರಿದಂತೆ ತೊಂದರೆಯಾಗುತ್ತಿದ್ದು, ಶೀಘ್ರ ಕಾಮಗಾರಿ ನಡೆಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಹನುಮಂತಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸದರೆ ಅವರು ದೂರವಾಣಿ ಬಂದ್ ಮಾಡಿಕೊಂಡಿದ್ದರು. ನಂತರ ಈ ವಿಷಯವನ್ನು ಶಾಸಕರ ಗಮನಕ್ಕೆ ತಂದಾಗ ತಕ್ಷಣವೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರ್ಯಾಯ ವಾಹನ ಸಂಚಾರಕ್ಕೆ ನಿರ್ಮಿಸಿದ್ದ ರಸ್ತೆಯ ದುರಸ್ಥಿ ಪಡಿಸುವ ಭರವಸೆ ನೀಡಿದರು.
ಬೆಳಗ್ಗೆ 10ಕ್ಕೆ ಟ್ರಾಕ್ಯರ್ನ್ನು ತೆರವುಗೊಳಿಸಿ ಪರ್ಯಾಯ ರಸ್ತೆಯನ್ನು ದುರಸ್ಥಿಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ನಂತರೇ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡೆದರು.
ಬಿಕ್ಕೋಡಿನಿಂದ ಆಲೂರು-ಭೈರಾಪುರ ಮಾರ್ಗವಾಗಿ ಮಗ್ಗೆಯ ಮೂಲಕ ಕೊಡಗನ್ನು ಸಂಪರ್ಕಿಸುವ ಈ ರಸ್ತೆ ಕಾಮಗಾರಿ ಪ್ರಾರಂಭವಾಗಿ ವರ್ಷಗಳೇ ಕಳೆದರೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಬೇಜವಾಬ್ದಾರಿಯಿಂದಾಗಿ ಕಾಮಗಾರಿ ಆಮೆ ಗತಿಯಲ್ಲಿ ನಡೆದ ಪರಿಣಾಮ ಜನವರಿಯಲ್ಲಿ ಮಳೆಯ ಕಾರಣವೊಡ್ಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ ಪರಿಣಾಮ ಕಳೆದ 8 ತಿಂಗಳಿನಿಂದಲೂ ಈ ಭಾಗದ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆಗಾಗಿ ನಿರ್ಮಿಸುತ್ತಿರುವ ಮೋರಿ ಸೇತುವೆಯ ಪಕ್ಕದಲ್ಲಿ ನಿಯಮಗಳ ಪ್ರಕಾರ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೂ ಪರ್ಯಾಯವಾಗಿ ಡಾಂಬರ್ ರಸ್ತೆಯನ್ನು ನಿರ್ಮಿಸಬೇಕಿತ್ತು. ಬಿಕ್ಕೋಡಿನಿಂದ ಮಗ್ಗೆಯವರೆಗೂ ನೂರಾರು ಈ ರೀತಿಯ ಅಪೂರ್ಣ ಮೋರಿಗಳನ್ನು ನಿರ್ಮಿಸುತ್ತಿದ್ದು, ಪ್ರತಿದಿನವು ಅಪಘಾತಗಳು ಸಂಭವಿಸುವುದು, ರಸ್ತೆಯಲ್ಲಿ ಗಾಡಿಗಳು ಹುರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯಾಗುವುದು ಸಾಮಾನ್ಯವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ತಿರುಗಿ ನೋಡುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ರೊಚ್ಚಿಗೆದ್ದಿದ್ದು, ಈ ರೀತಿಯ ಸೇತುವೆಗಳಿರುವ ಪ್ರತಿ ಗ್ರಾಮಗಳಲ್ಲೂ ಗ್ರಾಮಸ್ಥರು ಪ್ರತಿಭಟನೆ ನಡೆಸುವ ಮುಂಚೆ ಶಾಸಕರು ಇತ್ತ ಗಮನ ಹರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಿ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಹಾಗೂ ಅಲ್ಲಿಯ ವರೆಗೂ ಪರ್ಯಾಯ ರಸ್ತೆಗಳನ್ನು ಡಾಂಬರೀಕರಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement