ಚಿರತೆ ದಾಳಿಯಿಂದ ಮೃತ ಮಹಿಳೆ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ
ಕ.ಪ್ರ.ವಾರ್ತೆ ಹಾಸನ ಆ. 14
ಚಿರತೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಸಣ್ಣಮ್ಮನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ದಲಿತ ಸಂಘಟನೆ ನೇತೃತ್ವದಲ್ಲಿ ಸಣ್ಣಮ್ಮನ ಕುಟುಂಬದವರು ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಹೋಬಳಿಯ ಹರದನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ವಾಸವಾಗಿದ್ದ ಪರಿಶಿಷ್ಟ ಜಾತಿ ಆದಿದ್ರಾವಿಡ ಉಪಜಾತಿಗೆ ಸೇರಿದ ಸಣ್ಣಮ್ಮ ಜೂ.9ರಂದು ಕಾಣೆಯಾಗಿದ್ದರು. ಕುಟುಂಬದವರು ಈಕೆಯ ಬಗ್ಗೆ ಹುಡುಕಾಟ ನಡೆಸಿದ್ದರೂ ಸುಳಿವು ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಚಿರತೆ ಏನಾದರೂ ದಾಳಿ ನಡೆಸಿರಬಹುದು ಎಂದು ಅನುಮಾನದಿಂದ ಬೆಟ್ಟದ ತಪ್ಪಲಿನಲ್ಲಿ ಹುಡುಕಾಟ ನಡೆಸಿದಾಗ ಸಣ್ಣಮ್ಮನ ಶವ ಪತ್ತೆಯಾಗಿದ್ದು, ಚಿರತೆ ದಾಳಿಯಿಂದ ಸಣ್ಣಮ್ಮ ಮೃತಪಟ್ಟಿದ್ದರು.
ಸಣ್ಣಮ್ಮ ಸಾವನ್ನಪ್ಪಿ ಎರಡೂವರೆ ತಿಂಗಳು ಕಳೆದರೂ ದಲಿತ ವಿರೋಧಿ ನೀತಿ ಅನುಸರಿಸುವ ಮೂಲಕ ಪರಿಹಾರ ನೀಡುವಲ್ಲಿ ತಾರತಮ್ಯ ವಹಿಸಲಾಗುತ್ತಿದೆ ಎಂದು ಕುಟುಂಬವರ್ಗದವರು ಆಕ್ರೋಶ ವ್ಯಕ್ತಪಡಿಸಿದರು.
ಚಿರತೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಈ ಭಾಗದ ಇತರರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಆದರೆ ದಲಿತ ಮಹಿಳೆ ಸಣ್ಣಮ್ಮನ ಕುಟುಂಬಕ್ಕೆ ಇನ್ನೂ ಪರಿಹಾರ ನೀಡಿಲ್ಲ. ಅರಣ್ಯ ಇಲಾಖೆಗೆ ಸರ್ಕಾರದಿಂದ ಹಣ ಬಿಡುಗಡೆ ಆಗಿದ್ದರೂ ವಿನಾಕಾರಣ ಹೇಳಿ ಪರಿಹಾರ ನೀಡುವುದನ್ನು ವಿಳಂಬ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಕೂಡಲೇ ಕುಟುಂಬಕ್ಕೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಈ ವಿರುದ್ಧ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಣ್ಣಮ್ಮನ ಪುತ್ರ ಗಿರೀಶ್ ಸೇರಿದಂತೆ ದಲಿತ ಸಂಘಟನೆ ಮುಖಂಡ ವಿಜಯಕುಮಾರ್, ಸತೀಶ್, ಹೆತ್ತೂರು ನಾಗರಾಜು, ತಿಮ್ಮಯ್ಯ ಹಾಗೂ ಇದ್ದರು.
ಡಿಸಿಯಿಂದ ಪರಿಹಾರ ನೀಡುವ ಭರವಸೆ: ಚಿರತೆ ದಾಳಿಯಿಂದ ಸಾವನ್ನಪ್ಪಿರುವ ಸಣ್ಣಮ್ಮನ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡುವುದಾಗಿ ಭರವಸೆ ನೀಡಿ, ಪ್ರತಿಭಟನೆ ಹಿಂಪಡೆಯುವಂತೆ ಜಿಲ್ಲಾಧಿಕಾರಿ ಅನ್ಬುಕುಮಾರ್ ಮನವಿ ಮಾಡಿದ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಪ್ರತಿಭಟನೆ ಹಿಂಪಡೆದಿದ್ದಾರೆ.