ಭ್ರಷ್ಟಾಚಾರ ತನಿಖೆಗೆ ನಿಯುಕ್ತಿಗೊಂಡ ಅಧಿಕಾರಿ ಬದಲಾವಣೆಗೆ ಆಗ್ರಹ
ಕ.ಪ್ರ ವಾರ್ತೆ ಸಕಲೇಶಪುರ ಆ. 14
ತಾಲೂಕಿನ ಕ್ಯಾಮನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆ ನಡೆಸಲು ನಿಯುಕ್ತಿಗೊಂಡಿರುವ ಅಧಿಕಾರಿಯನ್ನು ಬದಲಾಯಿಸುವಂತೆ ಕ್ಯಾಮನಹಳ್ಳಿ ಗ್ರಾಮ ಪಂಚಾಯ್ತಿ ಮುಂಭಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.
ಕಳೆದ ಸಾಲಿನಲ್ಲಿ ಕ್ಯಾಮನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೊಳವೆ ಬಾವಿ ದುರಸ್ತಿ ಹಾಗೂ ಸಸಿ ಸಾಗಾಣಿಕೆಯಲ್ಲಿ ಬಾರಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ತನಿಖೆಗೆ ಆಗಮಿಸಿದ್ದ ತಂಡ ನೌಕರರ ರಕ್ಷಣೆ ಮಾಡುವ ಉದ್ದೇಶದಿಂದ ತನಿಖೆ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೊಳವೆ ಬಾವಿ ದುರಸ್ತಿ ಹೆಸರಿನಲ್ಲಿ ಕ್ಯಾಮನಹಳ್ಳಿ ಗ್ರಾಪಂ ನೌಕರ ಪರಮೇಶ್ ಎಂಬಾತ 2010 ರಿಂದ 2013 ರ ಅವಧಿಯಲ್ಲಿ ಒಂದು ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆಸಿದ್ದಾರೆ. ಈ ಬಗ್ಗೆ ದಾಖಲೆ ಸಹಿತ ಗ್ರಾಮಸ್ಥರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ದೂರಿದರು.
ಅಂದಿನ ತಾಪಂ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಸಿದ್ದರಾಜು ಈ ವ್ಯಕ್ತಿಯ ರಕ್ಷಣೆಗೆ ನಿಂತ ಪರಿಣಾಮ ಭಾರೀ ಭ್ರಷ್ಟಾಚಾರ ಮುಚ್ಚಿಹೋಗುವ ಹಂತಕ್ಕೆ ಬಂದು ತಲುಪಿದೆ. ಆದರೆ ಇದೇ ಅಧಿಕಾರಿ ಇಂದು ಜಿಪಂ ಯೋಜನಾಧಿಕಾರಿಯಾಗಿ ಬಡ್ತಿ ಪಡೆದಿದ್ದು ಜಿಲ್ಲಾಧಿಕಾರಿಗಳು ಇವರನ್ನು ಭ್ರಷ್ಟಾಚಾರ ತನಿಖಾಧಿಕಾರಿಯಾಗಿ ನೇಮಿಸಿದ್ದಾರೆ. ಆದ್ದರಿಂದ ಈ ಅಧಿಕಾರಿಯಿಂದ ನ್ಯಾಯಸಮ್ಮತ ತನಿಖೆ ಅಸಾಧ್ಯ. ಇವರು ಭ್ರಷ್ಟಾಚಾರ ತನಿಖೆ ನಡೆಸುವ ಮೂಲಕ ನೌಕರರ ರಕ್ಷಣೆಗೆ ಮುಂದಾಗುವ ಸಂಭವ ಹೆಚ್ಚಿದೆ.
ಆದ್ದರಿಂದ ಜಿಲ್ಲಾಧಿಕಾರಿಗಳು ಭ್ರಷ್ಟಾಚಾರ ತನಿಖೆ ನಡೆಸಲು ಬೇರೆ ಅಧಿಕಾರಿಯನ್ನು ನೇಮಿಸ ಬೇಕು ಎಂದು ಒತ್ತಾಯಿಸಿ ತನಿಖೆ ನಡೆಸಲು ಆಗಮಿಸಿದ್ದ ಯೋಜನಾಧಿಕಾರಿಗೆ ಅಡ್ಡಿಪಡಿಸಿದ್ದಲ್ಲದೆ ತನಿಖಾ ವರದಿಗೆ ಸಹಿ ಹಾಕದಂತೆ ಗ್ರಾಪಂ ಸದಸ್ಯರನ್ನು ತಡೆಯುವಲ್ಲಿ ಯಶಸ್ವಿಯಾದರು. ತನಿಖಾ ವರದಿ ಸಿದ್ದಪಡಿಸಿದ ಅಧಿಕಾರಿಗಳು ನೌಕರರ ಸಹಿ ಪಡೆದು ಹಿಂದಿರುಗಿದರು.