ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಾಹನ ಡಿಕ್ಕಿ: ಸ್ಥಳದಲ್ಲೇ ಚಿರತೆ ಸಾವು

Rashmi Kasaragodu
Updated On : 15 Aug 2013, 12:24 pm

ಕ.ಪ್ರ.ವಾರ್ತೆ  ಚನ್ನರಾಯಪಟ್ಟಣ  ಆ.14
ವೇಗವಾಗಿ ಚಲಿಸುತ್ತಿದ್ದ ವಾಹನಕ್ಕೆ ಚಿರತೆಯೊಂದು ಸಿಕ್ಕಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 75ರ  ಕತ್ತರಿಘಟ್ಟ ಗೇಟ್ ಬಳಿ ಒಂದೂವರೆ ವರ್ಷದ ಹೆಣ್ಣು ಚಿರತೆ ಆಹಾರಕ್ಕಾಗಿ ಸುತ್ತಾಡಿ ತನ್ನ ಗೂಡಿಗೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ವಾಹನಕ್ಕೆ ಸಿಕ್ಕಿ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ರಸ್ತೆಯಲ್ಲಿಯೇ ಸಾವಿಗೀಡಾಗಿದೆ.
ಮುಂಜಾನೆ 6ರ ಸಮಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ನೋವಿನಿಂದ ಚಿರತೆ ಬಳಲುತ್ತಿದ್ದ ಸಂದರ್ಭದಲ್ಲಿ ಅಕ್ಕ ಪಕ್ಕದ ಜಮೀನಿನ ರೈತರು ಚಿರತೆಯನ್ನು ನೋಡಿ ಅದಕ್ಕೆ ಕುಡಿಯಲು ನೀರು ನೀಡಿದರು. ತಲೆಗೆ ಬಿದ್ದಿದ್ದ ಪೆಟ್ಟಿನಿಂದ ಚೇತರಿಸಿಕೊಳ್ಳಲಾಗದೆ ಚಿರತೆ ಮೃತಪಟ್ಟಿದೆ.
ಕಳೆದ ಎರಡು ತಿಂಗಳು ಹಿಂದಷ್ಟೇ ಕತ್ತರಿಘಟ್ಟ ಗೇಟ್ ಬಳಿಯೇ ಮೂರು ವರ್ಷದ ಚಿರತೆ ರಾತ್ರಿ ವಾಹನವೊಂದಕ್ಕೆ ಸಿಕ್ಕಿ ಮೃತಪಟ್ಟಿತ್ತು. ಬುಧವಾರ ಮತ್ತೊಂದು ಚಿರತೆ ಮೃತಪಟ್ಟಿದೆ.
ಪಟ್ಟಣದ ಪಶು ಆಸ್ಪತ್ರೆಯಲ್ಲಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ,  ಬೆಲಸಿಂದ ಶ್ರೀವನದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.
ತಾಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚುತ್ತಿದ್ದು, ಅರಣ್ಯಗಳಲ್ಲಿ ಆಹಾರ ಸಿಗದೆ ಅವುಗಳು ಗ್ರಾಮಗಳಿಗೆ ನುಗ್ಗುತ್ತಿವೆ. ಚಿರತೆ ದಾಳಿಗೆ ಗ್ರಾಮಗಳಲ್ಲಿ ಬೀದಿ ನಾಯಿಗಳೆಲ್ಲವೂ ಬಲಿಯಾಗಿದ್ದು, ಅವುಗಳು ಸಿಗದಿದ್ದಾಗ ಮೇಕೆ ಹಾಗೂ ಕುರಿಗಳನ್ನು ಕಟ್ಟಿರುವ ಕೊಟ್ಟಿಗೆಗಳಿಗೆ ನುಸುಳಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ.
ಚಿರತೆ ಹಾವಳಿಯನ್ನು ಅರಿತ ರೈತರು ಕೊಟ್ಟಿಗೆಗಳ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದು, ಕಾಡಿನಲ್ಲಿ ಆಹಾರ ಸಿಗದ ಕಾರಣ ಚಿರತೆಗಳು ಕಬ್ಬಿನಗದ್ದೆ, ದಟ್ಟನೆಯ ಪೊದರು ಹಾಗೂ ಕಲ್ಲು ಮಂಟಪಗಳಲ್ಲಿ ವಾಸ ಮಾಡುತ್ತಾ ಗ್ರಾಮಕ್ಕೆ ನುಗ್ಗಿ ಜಾನುವಾರುಗಳನ್ನು ಹಿಡಿದು ತಿನ್ನುತ್ತಿವೆ.
ಗ್ರಾಮಗಳ ಬಳಿಯೇ ವಾಸಸ್ಥಳ ಮಾಡಿಕೊಂಡಿರುವ ಚಿರತೆಗಳು ಕಳೆದ ತಿಂಗಳು ಕತ್ತರಿಘಟ್ಟ ಕೆರೆಯಲ್ಲಿ ಮೇಯುತ್ತಿದ್ದ ಕುರಿಗಳನ್ನು ಬೇಟೆಯಾಡಲು ಬಂದ ಸಂದರ್ಭದಲ್ಲಿ ಅದನ್ನು ತಡೆಯಲು ರೈತ ಮುಂದಾದಾಗ  ನಾಲ್ವರ ಮೇಲೆ ಹಲ್ಲೆ ಮಾಡಿ ವಾಪಸಾಗಿ ಮತ್ತೆ ಅದೇ ದಿನ ಸಂಜೆ ಗ್ರಾಮದ ಬಳಿಯೇ ಬೇಟೆಗೆ ಬಂದ ಸಂದರ್ಭದಲ್ಲಿ ಗ್ರಾಮಸ್ಥರು ಕಾಡುಹಂದಿ ಬೇಟೆಗಾಗಿ ಇಟ್ಟುಕೊಂಡಿದ್ದ ಬಲೆ ಬೀಸಿ ಅದನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ನೀಡಿದ್ದರು.
3 ತಿಂಗಳ ಹಿಂದಷ್ಟೇ:   ಮೂರು ತಿಂಗಳ ಹಿಂದಷ್ಟೇ ತಾಲೂಕಿನ ಕರಿಮಾರನಹಳ್ಳಿ ತೋಟದ ಮನೆಯ ಪಕ್ಕದಲ್ಲಿಯೇ ಎರಡು ಚಿರತೆಗಳು ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿದ್ದವು. ಇದಾದ ಒಂದೇ ವಾರದಲ್ಲಿ ಯಲಿಯೂರು ಬಳಿ  ಎರಡು  ಚಿರತೆಗಳು  ಬೋನಿಗೆ ಬಿದ್ದು ಅಲ್ಲಿನ ಜನತೆಯ ಆತಂಕ ದೂರ ಮಾಡಿತ್ತು.
 ಮಾದಿಹಳ್ಳಿ ಹಾಗೂ ರಾಜಾಪುರಗಳಲ್ಲಿನ ನಾಯಿಗಳನ್ನು ಬೇಟೆಯಾಡುತ್ತಿರುವ ಚಿರತೆಗಳು ಅವುಗಳು ಸಿಗದಿದ್ದಾಗ ಮೇಕೆ ಹಾಗೂ ಕುರಿಗಳ ಮೇಲೆ ಬೀಳುತ್ತಿದ್ದರೂ ಅರಣ್ಯ ಇಲಾಖೆಯವರು ಗಮನಹರಿಸುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.
ತಾಲೂಕಿನ ಹಲವೆಡೆಗಳಲ್ಲಿ ಚಿರತೆಗಳ ಹಾವಳಿ ಹೆಚ್ಚುತ್ತಿದ್ದು, ರೈತರು ರಾತ್ರಿ ಸಂದರ್ಭದಲ್ಲಿ ಪಂಪ್‌ಸೆಟ್‌ಗಳಿಂದ ಜಮೀನಿಗೆ ನೀರು ಹಾಯಿಸಲು ಭಯಭೀತರಾಗಿದ್ದಾರೆ. ಅಲ್ಲದೆ, ಹಗಲಿನಲ್ಲಿಯೂ ಕೆಲ ಗ್ರಾಮಗಳಲ್ಲಿ ಕಬ್ಬಿನ ಗದ್ದೆಗಳಿಗೆ ಹೋಗಲು ಜನತೆ ಭಯಪಡುತ್ತಿದ್ದಾರೆ.
ಕಳೆದ ಒಂದು ವರ್ಷದಲ್ಲಿ 6 ಚಿರತೆಗಳನ್ನು ಅರಣ್ಯ ಇಲಾಖೆ ಹಾಗೂ ರೈತರು ಜಂಟಿಯಾಗಿ ಬೋನಿಗೆ ಬೀಳಿಸಿದರೆ, ಎರಡು ಚಿರತೆಗಳು ಅಪಘಾತದಲ್ಲಿ ಹಾಗೂ ಒಂದು ಚಿರತೆಯನ್ನು ರೈತರೇ ಬಲೆ ಹಾಕಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement