ಸ್ವಾತಂತ್ರ್ಯ ದಿನದಂದು ಸಿಹಿ ಹಂಚುವ ಬದಲು ರಕ್ತದಾನ ಮಾಡಿ: ಗುರೂಜಿ
ಸಕಲೇಶಪುರ: ತಾಲೂಕು ಜಾನಪದ ಪರಿಷತ್, ನ್ಯಾಯವಾದಿಗಳ ಸಂಘ, ಲಯನ್ಸ್, ರೋಟರಿ ಸಂಸ್ಥೆಗಳ ಆಶ್ರಯದಲ್ಲಿ ಆ.15ರಂದು ಇಲ್ಲಿಯ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
ಈ ಸಂಬಂಧ ಪಟ್ಟಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಡಗೂರಿನ ಚೇತನ್ ಗುರೂಜಿ ಮಾತನಾಡಿ, ರಾಷ್ಟ್ರ ಸಿಹಿ ಹಂಚುವುದಕ್ಕಿಂತಲೂ ರಕ್ತದಾನ ಮೂಲಕ ಸ್ವಾತಂತ್ರೋತ್ಸವ ಆಚರಿಸುವುದು ಅರ್ಥಪೂರ್ಣ ಎಂದರು.
ತಾವು ಇದುವರೆಗೆ ಒಟ್ಟು 29 ಬಾರಿ ರಕ್ತದಾನ ಮಾಡಿರುವುದಾಗಿ ಹೇಳಿದ ಅವರು, ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಾ ಹೋದರೆ ಕೊಬ್ಬಿನಂಶ ಕಡಿಮೆ ಆಗುತ್ತದೆ. ಬಿಪಿ ಸಮಸ್ಥಿತಿಗೆ ಬರುತ್ತದೆ. ನರಗಳ ದೌರ್ಬಲ್ಯ ತಡೆ ಗಟ್ಟಬಹುದು, ಹಿಮೋಗ್ಲೋಬೀನ್ ಅಂಶ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ರಕ್ತದಾನ ಶಿಬಿರ ವ್ಯವಸ್ಥಾಪಕ ಮೇಘಟವಳ್ಳಿ ಎಂ.ಪಿ.ಹರೀಶ್ ಮಾತನಾಡಿ, 2 ಲಕ್ಷಕ್ಕೂ ಹೆಚ್ಚು ಮಂದಿ ಪ್ರಾಣ ತ್ಯಾಗ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅವರ ನೆನಪಿನಲ್ಲಿ ರಕ್ತದಾನ ಮಾಡುವುದರಿಂದ ಜೀವ ರಕ್ಷಣೆ ಮಾಡಿದ ಪುಣ್ಯ ಲಭಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.