ಆಲೂ ಬೆಳೆಗೆ ಪ್ರತಿ ಹೆಕ್ಟೇರ್ಗೆ ರು. 1500: ರಾಮಲಿಂಗಾರೆಡ್ಡಿ
ಕನ್ನಡಪ್ರಭ ವಾರ್ತೆ ಹಾಸನ ಆ. 15
ಆಲೂ ಬೆಳೆಗೆ ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಸಿದ ರೈತರಿಗೆ ಪ್ರತಿ ಹೆಕ್ಟೇರ್ಗೆ 1500 ರು.ಗಳನ್ನು ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದಿಂದ ನಡೆದ 67ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ಸಾರಿದ ಸಚಿವರು, ಪ್ರಸ್ತುತ ಸಾಲಿನಲ್ಲಿ ಆಲೂ ಬೆಳೆಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗಿದೆ ಎಂದು ತಿಳಿಸಿದರು.
ಈ ಪ್ಯಾಕೇಜ್ನಡಿ ಪ್ರತಿ ಹೆಕ್ಟೇರ್ಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಸಸ್ಯ ಸರಂಕ್ಷಣೆ, ಔಷಧಿ ಮಾರಾಟ, ಉಚಿತವಾಗಿ ಜೈವಿಕ ಶಿಲೀಂಧ್ರನಾಶಕ ಮತ್ತು ಜೈವಿಕ ಗೊಬ್ಬರ ವಿತರಣೆ ಹಾಗೂ ಸಾವಯವ ಗೊಬ್ಬರಕ್ಕೆ ಸಹಾಯಧನ ನೀಡಲಾಗುತ್ತಿದೆ.
ಈಗಾಗಲೇ ಜಿಲ್ಲೆಯಲ್ಲಿ 15,230 ರೈತ ಫಲಾನುಭವಿಗಳಿಗೆ ಶೇ.50 ರ ರಿಯಾಯಿತಿ ದರದಲ್ಲಿ ಸಸ್ಯ ಸಂರಕ್ಷಣೆ ಔಷಧಿ ವಿತರಿಸಲಾಗಿದೆ. 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂ ಬಿತ್ತನೆಯಾಗಿದ್ದು, ಈ ಬಾರಿ ಮಳೆ ಹೆಚ್ಚಳದಿಂದ ರೈತರಿಗೆ ಹಾನಿಯಾಗಿದೆ ಎಂತಲೂ ಹೇಳಿದರು. ರಾಜ್ಯದ ಯಾರೊಬ್ಬರೂ ಹಸಿವಿನಿಂದ ಬಳಲಬಾರದೆಂಬ ಉದ್ದೇಶದಿಂದ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಒಂದು ರು.ಗೆ ಕೆಜಿ ಅಕ್ಕಿಯಂತೆ 30 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಹಾಗೂ ಮಕ್ಕಳಲ್ಲಿನ ಅಪೌಷ್ಠಿಕತೆ ತಡೆಗೆ ಕ್ಷೀರಭಾಗ್ಯ ಯೋಜನೆಯನ್ನು ಕಾಂಗ್ರೆಸ್ ಬಂದ ಮೂರೇ ತಿಂಗಳಿನಲ್ಲಿ ಚಾಲನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ 94,515 ಮಕ್ಕಳಿಗೆ ಉಪಯೋಗ: ಕ್ಷೀರ ಭಾಗ್ಯ ಯೋಜನೆಯಡಿ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯ 1,70,765 ಮಕ್ಕಳಿಗೆ ಆಗಸ್ಟ್ 1ರಿಂದ ವಾರದಲ್ಲಿ 3 ದಿನ ಪ್ರತಿದಿನ 150 ಎಂಎನ್ ಹಾಲು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 94,515 ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಬಸವ ವಸತಿ ಯೋಜನೆಯಡಿ ಪಲಾನುಭವಿಗಳಿಗೆ ನೀಡುತ್ತಿದ್ದ ಸಹಾಯಧನವನ್ನು ಒಂದು ಘಟಕಕ್ಕೆ ರು.75 ಸಾವಿರದಿಂದ 1.20 ಲಕ್ಷ ರು.ಗಳಿಗೆ ಏರಿಕೆ ಮಾಡಲಾಗಿದೆ. 2013-14ನೇ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೆ 20 ಮನೆ ಗುರಿ ನಿಗದಿಪಡಿಸಲಾಗಿದೆ. 2013-14ನೇ ಸಾಲಿನಲ್ಲಿ ಇಂದಿರಾ ಆವಾಸ್ ಯೋಜನೆಯಡಿ 2552 ಮನೆಗಳ ಗುರಿ ನಿಗದಿಪಡಿಸಿದೆ. ನಿರ್ಮಲ ಭಾರತ ಅಭಿಯಾನದಡಿ ಜಿಲ್ಲೆಯಲ್ಲಿ 1,02,611 ಶೌಚಾಲಯ ನಿರ್ಮಿಸಲಾಗಿದೆ. ಇದಲ್ಲದೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಹಭಾಗಿತ್ವದಲ್ಲಿ ಇದುವರೆಗೆ ಜಿಲ್ಲೆಯಲ್ಲಿ 7200 ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ ಎಂದು ವಿವರಿಸಿದರು.
ರು. 6.12 ಕೋಟಿ ಸಾಲ ಮನ್ನಾ: 2013-14ನೇ ಸಾಲಿನಲ್ಲಿ ಜಿಲ್ಲಾ ಪಂಚಾಯ್ತಿಯ ಯೋಜನಾ ಕಾರ್ಯಕ್ರಮಗಳಿಗೆ 10,082.59 ಲಕ್ಷ ರು. ಅನುದಾನ ನಿಗದಿಪಡಿಸಿದ್ದು, ಈಗಾಗಲೇ 2448,48 ಲಕ್ಷ ರು.ಬಿಡುಗಡೆಯಾಗಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಡಿ ಅಲ್ಪಸಂಖ್ಯಾತರಿಗೆ ವಿತರಿಸಿದ್ದ ಸಾಲ ಮನ್ನಾ ಮಾಡಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ 2776 ಫಲಾನುಭವಿಗಳಿಗೆ 6.12 ಕೋಟಿ ರು.ಸಾಲ ಮನ್ನಾ ಮಾಡಲಾಗಿದೆ. ಅಲ್ಲದೆ ಈ ವರ್ಷ ಈಗಾಗಲೇ ನಾನಾ ಬ್ಯಾಂಕ್ಗಳ ಮೂಲಕ 74 ಕೋಟಿ ರು.ಗಳ ಸಾಲವನ್ನು ಅಲ್ಪಸಂಖ್ಯಾತರಿಗೆ ವಿತರಿಸಲು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ. ಅರಣ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ 341ಹೆಕ್ಟೇರ್ನಲ್ಲಿ ನೆಡುತೋಪು ಬೆಳೆಸುವ ಗುರಿ ಹೊಂದಲಾಗಿದೆ. ರೈತರಿಗೆ 1.20 ಲಕ್ಷ ಸಸಿ ವಿತರಿಸುವ ಗುರಿ ಇದ್ದು, ಈಗಾಗಲೇ 7.75 ಲಕ್ಷ ಸಸಿ ವಿತರಿಸಲಾಗಿದೆ ಎಂದರು.
ಚನ್ನರಾಯಪಟ್ಟಣ ಸಮೀಪದ ಬೆಲಸಿಂದ ಪ್ರಕೃತಿ ವನದಲ್ಲಿರುವ ಶ್ರೀಗಂಧದ ರಕ್ಷಣೆಗಾಗಿ ದೋಣಿ ವಿಹಾರ, ಮಕ್ಕಳ ಪಾರ್ಕ್, ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿ ಕೇಂದ್ರವನ್ನಾಗಿ ಪರಿವರ್ತಿಸಲು ಯೋಜನೆ ತಯಾರಿಸಿ ಅನುಮೋದನೆಗೆ ಸಲ್ಲಿಸಿದೆ ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ಧ: ಈ ವರ್ಷ ಉತ್ತಮ ಮಳೆಯಾಗಿದ್ದು, ಅವಧಿಗೂ ಮುನ್ನವೇ ಜಿಲ್ಲೆಯ ಜೀವನದಿ ಹೇಮಾವತಿ, ಯಗಚಿ ಜಲಾಶಯ ಸೇರಿದಂತೆ ನಾಡಿನ ಬಹುತೇಕ ಎಲ್ಲಾ ಜಲಾಶಯಗಳು ಭರ್ತಿಯಾಗಿರುವುದು ಸಂತಸ ಸಂಗತಿ ಎಂದರು.
ಇರುವ ನಮಗೆ ಗಡಿಯಲ್ಲಿ ಪಾಕಿಸ್ತಾನ ಮತ್ತು ಚೀನಾ ನಿರಂತರವಾಗಿ ಆತಂಕ ಒಡ್ಡುತ್ತಲೇ ಬಂದಿವೆ. ಈ ಎಲ್ಲಾ ಸವಾಲುಗಳನ್ನು ನಾವು ಈವರೆಗೂ ಮೆಟ್ಟಿ ನಿಂತು ನಿಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಕಾಯ್ದುಕೊಂಡಿದ್ದೇವೆ. ಇದರಲ್ಲಿ ನಮ್ಮ ವೀರ ಯೋಧರ ಪಾತ್ರವೂ ಅವಿಸ್ಮರಣೀಯ ಎಂದು ಹೇಳಿದರು.