ಉದ್ಯೋಗ, ಆಹಾರದ ಹಕ್ಕಿಗಾಗಿ ಹೋರಾಟ ವಿಷಾದ
ಕ.ಪ್ರ.ವಾರ್ತೆ ಆಲೂರು ಆ. 15
ಪ್ರತಿ ಪ್ರಜೆಯು ದೇಶ ಭಕ್ತಿ ಬೆಳೆಸಿಕೊಳ್ಳುವಂತೆ ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 67ನೇ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಪ್ರಗತಿ ಮರೀಚಿಕೆಯಾಗಿದ್ದು ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಉದ್ಯೋಗ, ಆರೋಗ್ಯ, ಆಹಾರದ ಹಕ್ಕಿಗಾಗಿ ಹೋರಾಟ ನಡೆಸಬೇಕಾಗಿರುವುದು ವಿಷಾದನೀಯ. ಬಡತನ, ನಿರುದ್ಯೋಗ ನಿರ್ಮೂಲನೆ ಹಾಗು ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ಹಾಕಬೇಕಾಗಿದೆಯೆಂದ ಅವರು, ಜಿಲ್ಲಾದ್ಯಂತ ಹಲವೆಡೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ನಷ್ಟ ಅನುಭವಿಸಿದ್ದು ಸರ್ಕಾರ ಹೆಚ್ಚು ಅನುದಾನ ನೀಡುವತ್ತ ಗಮನ ಹರಿಸಬೇಕು. ಮೂಲಭೂತ ಸೌಕರ್ಯ ನೀಡಬೇಕು. ಕನಿಷ್ಠ 100 ಕೋಟಿ ರು.ವಿಶೇಷ ಅನುದಾನವನ್ನು ತಾಲೂಕಿಗೆ ನೀಡಬೇಕೆಂದರು.
ನಿವೃತ್ತ ಬಿಇಒ ಎಂ.ಬಿ.ವಿಜಯಕಾಂತ್ ಹಾಗೂ ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಯಶೋಧ ಹರೀಶ್ ಮಾತನಾಡಿದರು. ತಾ ದಂಡಾಧಿಕಾರಿ ಬಾಬು ದೇವಾಡಿಗ, ಪ್ರಭಾರಿ ಇಒ ಶಿವಕುಮಾರಪ್ಪ, ಪಿಎಸ್ಐ ಜಯಲಕ್ಷ್ಮಿ, ಬಿಇಒ ಪುಷ್ಪಲತಾ, ನಾಹೋ ಸಮಿತಿ ಅಧ್ಯಕ್ಷ ಎಚ್.ಬಿ.ಧರ್ಮರಾಜ್, ಜಿಪಂ ಮಾಜಿ ಸದಸ್ಯ ಸುಬ್ಬಶೆಟ್ಟಿ, ತಾ. ಪತ್ರಕರ್ತರ ಸಂಘದ ಅಧ್ಯಕ್ಷ ರಾಘು, ಸನೌ ಸಂಘದ ಅಧ್ಯಕ್ಷ ವರದರಾಜ್, ಲಯನ್ಸ್ ಅಧ್ಯಕ್ಷ ನೀಲೇಶ್, ಕಸಾಪ ಅಧ್ಯಕ್ಷ ಗುಲಾಂ ಸತ್ತಾರ್, ಡಾ.ಜಯರಾಜ್, ಬಲಿಜ ಸಂಘದ ಅಧ್ಯಕ್ಷ ಎಂ.ರಂಗನಾಥ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಾನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ತಮ್ಮಯ್ಯ, ಕೆ.ವೈ.ಲಕ್ಷ್ಮೇಗೌಡ, ಬುಡೆನ್ಸಾಬ್ ಧರ್ಮಲಿಂಗಮ್, ಸುಶೀಲಮ್ಮರನ್ನು ಸನ್ಮನಿಸಲಾಯಿತು.
ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದ ಆಹ್ವಾನಿತರಲ್ಲಿ ಶಾಸಕರು ಹಾಗೂ ತಾಪಂ ಅಧ್ಯಕ್ಷರನ್ನು ಹೊರತುಪಡಿಸಿ ಪ್ರೊಟೊಕಾಲ್ ನೆಪವೊಡ್ಡಿ ಸಂಸದರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಕೆಲವು ಅಧಿಕಾರಿಗಳು ಬಾರದಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಯಿತು. ಯಾವ ಕಾರ್ಯಕ್ರಮಕ್ಕೂ ಬಾರದೆ ಇದ್ದವರ ಹೆಸರು ಹಾಕುವ ಔಚಿತ್ಯವಾದರೂ ಏನೆಂದು ಪ್ರಶ್ನಿಸಿದರು.
ಈ ಬಾರಿಯ ವಿಶೇಷವೆಂದರೆ ಪಟ್ಟಣದ ಜಾಮಿಯ ಮಸೀದಿಯ ಮೌಲ್ವಿಗಳಾದ ಅನ್ಸರ್ ಅಹಮದ್ ಖಾಸಿಂ ಮುಸ್ಲಿಮರೊಂದಿಗೆ ಉರ್ದು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿದರು. ಪಟ್ಟಣದ ಗೂಡ್ಸ್ ಆಟೋ ನಿಲ್ದಾಣದಲ್ಲಿ ಟಿಎಚ್ಒ ಡಾ.ತಿಮ್ಮಯ್ಯ, ಪೋಸ್ಟ್ ಆಫೀಸ್ನಲ್ಲಿ ಲಯನ್ಸ್ ಕಾರ್ಯದರ್ಶಿ ರೇಣುಕಾ ಪ್ರಸಾದ್ ಧ್ವಜಾರೋಹಣ ಮಾಡಿದರು. ಪಟ್ಟಣದ ವಿವಿಧೆಡೆ ಶ್ರದ್ಧೆಯಿಂದ ಆಚರಿಸಲಾಯಿತು. ಪಟ್ಟಣದ ಬಿಲಿವರ್ಸ್ ಚರ್ಚವತಿಯಿಂದ ತಾ. ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇಕ್, ಹಣ್ಣು ಹಂಪಲು ವಿತರಿಸಲಾಯಿತು.
ಡಿಸಿಸಿ ಬ್ಯಾಂಕ್ನಲ್ಲಿ ಅವಮಾನ-ಆಕ್ರೋಶ: ಎಚ್ಡಿಸಿಸಿ ಬ್ಯಾಂಕ್ ಆವರಣದಲ್ಲಿ ರಾಷ್ಟ್ರ ಧ್ವಜವನ್ನು ಕಂಬಕ್ಕೆ ಗಂಟು ಹಾಕಿ ಧ್ವಜ ಹಾರಾಡದಂತೆ ಅವಮಾನ ಮಾಡಿದ್ದಾರೆ. ಇಂತಹವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಅಕ್ರೋಶ ವ್ಯಕ್ತ ಪಡಿಸಿದರು. ಆರಕ್ಷಕ ಠಾಣೆಯಲ್ಲಿ ಬಣ್ಣ ಮಾಸಿದ ಧ್ವಜ ಹಾರಿಸಿದ್ದರೆ, ಸ್ಟೇಟ್ ಬ್ಯಾಂಕ್ನಲ್ಲಿ ಓರೆಯಾಗಿರುವ ಕಂಬಕ್ಕೆ ಧ್ವಜವನ್ನು ಕಟ್ಟಲಾಗಿದ್ದು ಅದು ಬೀಳುತ್ತಿರುವಂತೆ ಭಾಸವಾಗುತ್ತಿತು. ಕರ್ನಾಟಕ ಬ್ಯಾಂಕ್ನಲ್ಲಿ ತೆಳುವಾದ ಪಾರದರ್ಶಕದಂತಹ ಧ್ವಜ ಹಾರಿಸಿದ್ದು, ಕೈಗಾರಿಕಾ ಕಚೇರಿ ಹಾಗು ರಾಜಸ್ವ ನಿರೀಕ್ಷಕರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಲಿಲ್ಲ.