ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಡಗರ, ಸಂಭ್ರಮದ ಸ್ವಾತಂತ್ರ್ಯೋತ್ಸವ

Rashmi Kasaragodu
Updated On : 16 Aug 2013, 12:35 pm

ಕನ್ನಡಪ್ರಭ ವಾರ್ತೆ   ಹಾಸನ   ಆ.15
ಜಿಲ್ಲಾದ್ಯಂತ ನಾನಾ ಕಡೆ ಗುರುವಾರ 67ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 67ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನರೆವೇರಿಸಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಕ್ಕಳು ರಾಷ್ಟ್ರ ಗೀತೆ, ನಾಡ ಗೀತೆ ಮತ್ತು ರೈತ ಗೀತೆಯನ್ನು ಹಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭಿಸಿದರು.
ನಂತರ ಸಚಿವರು, ತೆರೆದ ವಾಹನದಲ್ಲಿ ತೆರಳಿ ಪೊಲೀಸ್ ತುಕಡಿ, ಎನ್ಸಿಸಿ, ಆರ್ಎಸ್ಎಸ್, ಸ್ಕೌಟ್ಸ್ ಗೈಡ್ಸ್  ಶಾಲಾ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಸಮವಸ್ತ್ರಧಾರಿ ವಿದ್ಯಾರ್ಥಿಗಳು ಮತ್ತು ಪೊಲೀಸ್ ತುಕಡಿಗಳ ತಂಡಗಳು ಆಕರ್ಷಕ ಪಥಸಂಚಲನ ನಡೆಸಿ ಎಲ್ಲರ ಮನಸೆಳೆದರು.
ಜಿಲ್ಲೆಯ ಎಲ್ಲಾ ಪ್ರಾಥಮಿಕ ಶಾಲೆಗಳಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ಮಕ್ಕಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತೆರೆದ ಜೀಪ್ನಲ್ಲಿ ಸಚಿವರು ಪೊಲೀಸ್, ಗೃಹ ರಕ್ಷಕದಳ, ಎನ್ಸಿಸಿ, ಸೇವಾದಳ, ಸ್ಕೌಟ್ಸ್ ಸೇರಿದಂತೆ 34 ಇತರೆ ತಂಡಗಳ ಪರಿಚಯ ಮಾಡಿಕೊಂಡರು.
ಶಾಲಾ ಮಕ್ಕಳು ರಾಷ್ಟ್ರ ಧ್ವಜ ಹಿಡಿದು ಓಡಾಡುವ ದೃಶ್ಯ ಸಾಮಾನ್ಯವಾಗಿತ್ತು. ಹತ್ತಾರು ಯುವಕರು ತಮ್ಮ  ಬೈಕ್ಗಳಲ್ಲಿ ದೊಡ್ಡ ರಾಷ್ಟ್ರಧ್ವಜಗಳನ್ನು ಹಿಡಿದುಕೊಂಡು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಬಸ್, ಲಾರಿ, ಆಟೋಗಳಲ್ಲಿ, ನಾನಾ ಸಂಘ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ದಾರಿಯುದ್ಧಕ್ಕೂ ಯುವಕರು ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದರು.
ಸನ್ಮಾನಿತರು: ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಆರ್.ವೆಂಕಟಸುಬ್ಬು(ಕಸ್ತೂರಿ), ಎಂ.ಶ್ರಿನಿವಾಸ ಅಯ್ಯಂಗಾರ್, ಮತ್ತು ಪಿ.ಎಸ್.ಶಂಕರ ನಾರಾಯಣ ಅವರನ್ನು ಸನ್ಮಾನಿಸಲಾಯಿತು.
2013ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಚಿಕ್ಕಹೊನ್ನೇನಹಳ್ಳಿಯ ವಿಜಯ ಪ್ರೌಢಶಾಲೆಯ ಹೃತ್ವಿಕ್, 2ನೇ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅರಸೀಕೆರೆಯ ಕೋಡಿ ಮಠ ಪದವಿ ಪೂರ್ವ ಕಾಲೇಜಿನ ಎಚ್.ಎ.ವೀಣಾ, ಕಲಾ ವಿಭಾಗದಲ್ಲಿ ಹೊಳೆನರಸೀಪುರ ತಾ. ಹರಿಹರಪುರದ ಸರ್ಕಾರಿ ಪಪೂ ಕಾಲೇಜಿನ ಪ್ರವೀಣಕುಮಾರ್.ಎಸ್.ಎಂ., ವಾಣಿಜ್ಯ ವಿಭಾಗದಲ್ಲಿ ನಗರದ ಎಂ.ಕೃಷ್ಣ ಪದವಿ ಪೂರ್ವ ಕಾಲೇಜಿನ ಸೃಜನ್ ಎನ್. ಮತ್ತು ಅಂತಿಮ ಪದವಿ ವಿಜ್ಞಾನ ವಿಭಾಗದಲ್ಲಿ ನಗರದ ಎ.ವಿ.ಕೆ.ಕಾಲೇಜಿನ ಚೈತ್ರ ಎಂ.ಎಲ್., ಕಲಾ ವಿಭಾಗದಲ್ಲಿ ಹೊಳೆನರಸೀಪುರ ಸರ್ಕಾರಿ ಮಹಿಳಾ ಕಾಲೇಜಿನ ಕಾಂತಾಮಣಿ ಎಚ್.ಡಿ., ವಾಣಿಜ್ಯ ವಿಭಾಗದಲ್ಲಿ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶ್ರೀಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.
ಕ್ರೀಡಾ ವಿಭಾಗದಲ್ಲಿ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಎಚ್.ಕೆ.ಪುಷ್ಪ, ರಾಷ್ಟ್ರೀಯ ಈಜು ಕ್ರೀಡಾ ಪಟು ಸೋನಿಕಾ ಎಂ.ರಾಜ್, ಅಂತಾರಾಷ್ಟ್ರೀಯ ಅಥ್ಲೆಟಿಕ್ ಪಟು ಗಂಗಮ್ಮ, ನೆಟ್ಬಾಲ್ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ನಗರದ ವಿಜಯ ಇಂಗ್ಲಿಷ್ ಮಾಧ್ಯಮ ಶಾಲೆಯ ಎಚ್.ಆರ್.ಉಷಾ, ಎ.ಬಿ.ಐಶ್ವರ್ಯ, ಭೂಮಿಕಾ, ವರ್ಷಿಣಿ ದೀಕ್ಷಿತ್, ಎಚ್.ಎಂ. ಯಶವಂತ ಕುಮಾರ್, ಎಚ್.ಡಿ. ರಕ್ಷಿತ್ಗೌಡ, ಎಚ್.ಎಂ.ಚಂದನ್ಗೌಡ. ಜೆ.ಪುನೀತ್ಗೌಡ, ವೈ.ಎ.ಮನೋಜ್, ಎಚ್.ಆರ್. ಆಕಾಶ್ ಅರವಿಂದ ಪ್ರೌಢಶಾಲೆಯ ಎಂ.ಶರ್ಮಿಳಾ ಅವರನ್ನು ಸನ್ಮಾನಿಸಲಾಯಿತು.
ಅತ್ಯುತ್ತಮ ಸೇವೆ ಸಲ್ಲಿಸಿರುವ ಹಿರಿಸಾವೆ ಠಾಣೆ ಹೆಡ್ಕಾನ್ಸ್ಟೇಬಲ್ ಪ್ರೇಮರಾಜ್, ಹಾಸನ ನಗರಸಭೆ ಪೌರ ಕಾರ್ಮಿಕ ಗೋವಿಂದರಾಜು, ಪತ್ರಿಕಾ ಕ್ಷೇತ್ರದಿಂದ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಹಾಸನ ವರದಿಗಾರ ಬಿ.ಆರ್.ಉದಯಕುಮಾರ್, ಎನ್ಸಿಸಿ ವಿಭಾಗದಿಂದ ನಗರದ ಸರ್ಕಾರಿ ಕಲಾ ಕಾಲೇಜಿನ ಕಿಶೋರ್ಕುಮಾರ್, ಕಿರಣಕುಮಾರ್, ಸರ್ಕಾರಿ ವಿಜ್ಞಾನ ಕಾಲೇಜಿನ ಡಿ.ಆರ್. ಸುನೀಲ್, ಭಾರತ ಸ್ಕೌಟ್ಸ್ ವಿಭಾಗದಲ್ಲಿ ನಗರದ ಓಪನ್ಗೈಡ್ಸ್ ಕಂಪನಿ ಬಿ.ಕಾಟೀಹಳ್ಳಿ ಕೊಪ್ಪಲಿನ ಶಾಲಿನಿ ಕೆ.ಕೆ.ನೀರಜ(ರಾಷ್ಟ್ರಪತಿ ಗೈಡ್), ಹಾಗೂ ಭಾರತ ಸೇವಾ ದಳದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಜಯ್ ಅವರನ್ನು  ಸನ್ಮಾನಿಸಿ ಗೌರವಿಸಲಾಯಿತು.


ಮನಸೆಳೆದ ಗೊಮ್ಮಟನ ವೈಭವ ಕಥಾಸಾರ ನೃತ್ಯ


ಗಂಗ ಸೇನಾಪತಿ ಚಾವುಂಡರಾಯನ ತಾಯಿ ಒಮ್ಮೆ ಜಿನತೀರ್ಥಂಕರ ವೃಷಭನಾಥ ಚರಿತ್ರೆ ಕೇಳಲು ಬಯಸುತ್ತಾಳೆ. ತಾಯಿಯ ಆಸೆಯಂತೆ ಚಾವುಂಡರಾಯ ಕವಿಗಳನ್ನು ಕರೆಸಿ ಕಥೆ ಕೇಳಿಸುತ್ತಾನೆ. ಬಾಹುಬಲಿಯ ತ್ಯಾಗದ ನೆನಪಿಗೆ ಭರತ ಪೌದನಪುರದಲ್ಲಿ ಬಾಹುಬಲಿಯ ಚಿನ್ನದ ಮೂರ್ತಿಯನ್ನು ಮಾಡಿ ನಿಲ್ಲಿಸಿದನೆಂಬ ಕಥೆ ಕೇಳಿದ ಚಾವುಂಡರಾಯನ ತಾಯಿ ಪೌದನಪುರಕ್ಕೆ ತನ್ನನ್ನು ಕರದೊಯ್ದು ಬಾಹುಬಲಿಯ ಮೂರ್ತಿಯನ್ನು ತೋರಿಸು ಎಂದು ಕೇಳುತ್ತಾಳೆ. ತಾಯಿಯೊಂದಿಗೆ ಉತ್ತರಕ್ಕೆ ಪ್ರಯಾಣ ಹೊರಟ ಚಾವುಂಡರಾಯ ಶ್ರವಣಬೆಳಗೊಳದ ಚಿಕ್ಕಬೆಟ್ಟಕ್ಕೆ ಬಂದು ನಿಲ್ಲುತ್ತಾನೆ. ಅಲ್ಲಿ ಆ ಬೆಟ್ಟದ ಮಹತ್ವವನ್ನು ಮುನಿಗಳನ್ನು ಕೇಳಲಾಗಿ ಮುನಿಗಳು ಉತ್ತರದ ಭದ್ರ ಬಾಹು ಮುನಿಗಳು ಹಾಗೂ ರಾಜಾ ಚಂದ್ರಗುಪ್ತ ಮೌರ್ಯರು ಅಲ್ಲಿಗೆ ಬಂದು ಸಮಾಧಿ ಹೊಂದಿದ ಬಗೆಗೆ ತಿಳಿಸುತ್ತಾರೆ. ಚಾವುಂಡರಾಯನ ಕನಸಿನಲ್ಲಿ ಪದ್ಮಾವತಿ ದೇವಿ ಮೂಡಿ, ಚಿಕ್ಕಬೆಟ್ಟದಿಂದ ಕಲ್ಲಿಗೆ ಬಾಣ ಹೊಡೆಯುವಂತೆಯೂ, ಆ ಕಲ್ಲಿನಲ್ಲಿಯೇ ಬಾಹುಬಲಿ ದರ್ಶನ ನೀಡುವನೆಂದೂ ಹೇಳುತ್ತಾಳೆ. ಅಂತೆ ಚಾವುಂಡರಾಯ ದೊಡ್ಡಬೆಟ್ಟದ ಕಲ್ಲಿಗೆ ಬಾಣ ಹೊಡೆಯುತ್ತಾನೆ. ಬಾಹುಬಲಿ ಆ ಕಲ್ಲಿನಲ್ಲಿ ಮೂಡುತ್ತಾನೆ ಎಂಬ ಗೊಮ್ಮಟನ ವೈಭವ ಕಥಾಸಾರವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಮನಸೆಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement