ಸಮಾನ ಶಿಕ್ಷಣ ಇನ್ನೂ ಸಾಧ್ಯವಾಗಿಲ್ಲ
ಕ.ಪ್ರ.ವಾರ್ತೆ ಹೊಳೆನರಸೀಪುರ ಆ.15
ಭಾರತಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದರೂ ಶೇ.69ರಷ್ಟು ಜನರು ಬಡತನ ರೇಖೆಗಿಂತಲೂ ಕೆಳಗಿರುವುದಲ್ಲದೆ, ಇಂದಿಗೂ ಗ್ರಾಮೀಣ ಮಕ್ಕಳಿಗೆ ಸಮರ್ಪಕ ಮತ್ತು ಸಮಾನ ಶಿಕ್ಷಣ ನೀಡಲು ದೇಶವನ್ನಾಳಿದ ಸರ್ಕಾರಗಳಿಗೆ ಸಾಧ್ಯವಾಗದೆ ಇರುವುದು ವಿಷಾದನೀಯ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ಬಯಲು ರಂಗಮಂದಿರ ಮೈದಾನದ ಆವರಣದಲ್ಲಿ ಗುರುವಾರ ತಾಲೂಕು ಆಡಳಿತ ಆಯೋಜಿಸಲಾಗಿದ್ದ 67ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶದಲ್ಲಿನ ಬಡತನ ರೇಖೆಯನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರ ಹಾಗೂ ರಾಜ್ಯದಲ್ಲಿನ ಎಲ್ಲ ಮಕ್ಕಳಿಗೂ ಸಮರ್ಪಕವಾಗಿ ಉನ್ನತ ವಿದ್ಯಾಭ್ಯಾಸ ದೊರೆಯುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳಬೇಕಿದೆ ಎಂದರು.
ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದ ಶಿಕ್ಷಣದ ಮಟ್ಟ ಕುಸಿಯುತ್ತಿದ್ದು, ಇದನ್ನು ತಡೆಯಲು ಸರ್ಕಾರಗಳು ಸೂಕ್ತ ಕ್ರಮವನ್ನು ಕೈಗೊಳ್ಳುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
75 ಸಾವಿರ ಕಿ.ಮೀ.ಗಳಷ್ಟು ಮಣ್ಣಿನ ರಸ್ತೆ: ಕಳೆದ 20 ವರ್ಷಗಳಿಂದ ಈಚೆಗೆ ರಾಜ್ಯದ ಎಲ್ಲಾ ಜಲಾಶಯಗಳೂ ಉತ್ತಮ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದರೂ, ಜಲಾಶಯದಲ್ಲಿನ ನೀರಿನ ಸೂಕ್ತ ಬಳಕೆಗೆ ಸರ್ಕಾರ ಮುಂದಾಗದಿರುವ ಕುರಿತು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಟೀಕಿಸಿದ ರೇವಣ್ಣ ಅವರು, ರಾಜ್ಯದಲ್ಲಿ ಇಂದಿಗೂ ಸುಮಾರು 75 ಸಾವಿರ ಕಿ.ಮೀ.ಗಳಷ್ಟು ಮಣ್ಣಿನ ರಸ್ತೆಗಳಿದ್ದು, ಇವುಗಳ ಅಭಿವೃದ್ಧಿಗೆ ಸರ್ಕಾರಗಳು ಮುಂದಾಗುವಂತೆ ಆಗ್ರಹಿಸಿದರು.
ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ತಾಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ್ ಮಂಜುಳ ಅವರು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಹಿರಿಯರು ಹಾಗೂ ಹೋರಾಟಗಾರರ ಕನಸನ್ನು ನನಸುಗೊಳಿಸುವ ಉಜ್ವಲ ನಿರೀಕ್ಷೆಗಳು ಇಂದಿನ ಯುವ ಪೀಳಿಗೆಯ ಮೇಲಿದ್ದು, ಸಮೃದ್ಧ ಹಾಗೂ ಸುರಕ್ಷಿತ ಭಾರತದ ಸದೃಢ ಏಕತೆಗೆ ಶ್ರಮಿಸಲು ಯುವಶಕ್ತಿಯು ಬದ್ಧವಾಗಿ ದೇಶದ ರಕ್ಷಣೆಗಾಗಿ ಶ್ರಮಿಸುತ್ತಿರುವ ಯೋಧರ ಸೇವೆಯನ್ನು ಸ್ಮರಿಸುತ್ತ ಉಗ್ರಗಾಮಿ ನಕ್ಸಲ್ ಹಾಗೂ ಕೋಮುವಾದವನ್ನು ಅಳಿಸಿ ಬಹು ಧರ್ಮಿಯರಾದ ನಾವು ಏಕತೆಯಿಂದ ದೇಶದ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದರು.
ಭಾರತ ವಿಶ್ವದಲ್ಲಿನ ದ್ವಿತೀಯ ಮಾನವ ಶಕ್ತ ರಾಷ್ಟ್ರವಾಗಿದ್ದು, ಸಂಪನ್ಮೂಲ ಸದ್ಭಳಕೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಶೈಕ್ಷಣಿಕ, ತಾಂತ್ರಿಕ ಹಾಗೂ ಮೌಲ್ಯಯುತ ಅಂಶಗಳನ್ನು ಗುಣಾತ್ಮಕವಾಗಿ ಮಾನವ ಶಕ್ತಿಯಲ್ಲಿ ಅಂತರ್ಗತಗೊಳಿಸಿ ಜನಶಕ್ತಿಯ ಪೂರ್ಣ ಪ್ರಯೋಜನ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಸಾಧಕರಿಗೆ ಸನ್ಮಾನ: ಪಟ್ಟಣದ ಮಾನಸ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಬಿ.ಟಿ.ಲೋಕೇಶ್ ಪ್ರಧಾನ ಭಾಷಣ ಮಾಡಿದರು. ಸಮಾರಂಭದಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಮಕ್ಕಳು ಹಾಗೂ ನಾನಾ ಕ್ಷೇತ್ರದ ಗಣನೀಯ ಸಾಧಕರನ್ನು ಸನ್ಮಾನಿಸಲಾಯಿತು.
ಪಟ್ಟಣದಲ್ಲಿ 67ನೇ ಸ್ವಾತಂತ್ರ್ಯೋತ್ಸವವನ್ನು ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘ, ಡಾ.ಅಂಬೇಡ್ಕರ್ ಆಟೋ ಚಾಲಕರ ಸಂಘ ಹಾಗೂ ಪಟ್ಟಣದ ವಿವಿಧ ವೃತ್ತಗಳಲ್ಲಿನ ಆಟೋ ಚಾಲಕರ ಸಂಘಗಳು, ಲಯನ್ಸ್,
ಹೌಸಿಂಗ್ ಬೋರ್ಡ್ ನಾಗರಿಕರು, ಎಬಿವಿಪಿ, ಟ್ಯಾಕ್ಸಿ ಚಾಲಕರ ಸಂಘ ಮೊದಲಾದ ಸಂಘ ಸಂಸ್ಥೆಗಳು ವಿಜೃಂಭಣೆಯಿಂದ ಆಚರಿಸಿದವು.
ತಾಪಂ ಅಧ್ಯಕ್ಷೆ ಕೆ.ಎಂ.ಚಂದ್ರಮತಿ, ಜಿಪಂ ಸದಸ್ಯ ಎಚ್.ಎನ್.ದೇವೇಗೌಡ, ಗೌರಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್, ಸಮಾಜ ಕಲ್ಯಾಣಾಧಿಕಾರಿ ರಂಗರಾಜು, ರೇಷ್ಮೇ ವಿಸ್ತರಣಾಧಿಕಾರಿ ಕೈಲಾಸಮೂರ್ತಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಪ್ರಕಾಶ್, ಲೋಕೋಪಯೋಗಿ ಇಲಾಖೆ ಅಧಿಕಾರಿ ಕೋದಂಡರಾಮಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಎನ್.ರಾಜೇಶ್, ತಾಲೂಕು ಕಸಾಪ ಅಧ್ಯಕ್ಷ ಪುಟ್ಟಸ್ವಾಮಪ್ಪ ಮೊದಲಾದವರು ಹಾಜರಿದ್ದರು. ಸ್ವಾತಂತ್ರ್ಯ ಆಚರಣೆಯ ಪ್ರಯುಕ್ತ ನಾನಾ ಶಾಲಾ ಮಕ್ಕಳು ಆಕರ್ಷಕ ಕವಾಯಿತು ನಡೆಯಿತು.